ರಾಮನಗರ: ಜಿಲ್ಲೆಯ ಪ್ರತಿಭಾನ್ವಿತ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಾಧನಾ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗಿಫ್ಟ್ ನೀಡಲಾಯಿತು. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭಾವಚಿತ್ರವನ್ನು ಮುದ್ರಿಸಿದ್ದ ವಾಚ್ ಗಳನ್ನು ಗಿಫ್ಟಾಗಿ ನೀಡುವ ಮೂಲಕ ಸರ್ಕಾರಿ ಕಾರ್ಯಕ್ರಮವನ್ನ ಡಿಕೆಶಿ ದುರುಪಯೋಗ ಪಡಿಸಿಕೊಂಡಿದ್ದಾರೆ.
ಅಂದಹಾಗೇ ರಾಮನಗರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ ಪುರಸಭೆ ಸಹಯೋಗದೊಂದಿಗೆ ಕನಕಪುರ ತಾಲೂಕಿನ ಹಾರೋಹಳ್ಳಿ ಸಮೀಪದ ರಸ್ತೆ ಜಕ್ಕಸಂದ್ರದ ಜೈನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಯ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
Advertisement
Advertisement
ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 500 ಮೌಲ್ಯದ ಗಿಫ್ಟ್, ಹಾಗೂ 1,000 ರೂಪಾಯಿಯ ಚೆಕ್ ಗಳನ್ನು ವಿತರಣೆ ಮಾಡಲಾಯಿತು. ಆದರೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ನೀಡಿದ್ದ ಗಿಫ್ಟ್ ನ ವಾಚ್ ಗಳಲ್ಲಿ ಡಿಕೆಶಿಯ ಭಾವಚಿತ್ರ ರಾರಾಜಿಸುತ್ತಿತ್ತು.
Advertisement
ಕಾರ್ಯಕ್ರಮವನ್ನ ಸರ್ಕಾರಿ ಕಾರ್ಯಕ್ರಮವಾಗಿ ಏರ್ಪಡಿಸಲಾಗಿತ್ತು. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕಾರ್ಯಕ್ರಮದ ಉಸ್ತುವಾರಿಯನ್ನು ಹೊತ್ತಿದ್ದರು. ಆದರೂ ಕೂಡ ಡಿಕೆಶಿ ಭಾವಚಿತ್ರದ ವಾಚ್ ಗಳು ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.
Advertisement
ಈ ಬಗ್ಗೆ ರಾಮನಗರ ಡಿಡಿಪಿಐ ಅಧಿಕಾರಿಯನ್ನ ವಿಚಾರಿಸಿದರೆ ಇಲ್ಲ ನಾವು ಯಾವುದೇ ರೀತಿಯ, ಯಾರ ಭಾವಚಿತ್ರವಿರುವ ಗಿಫ್ಟ್ ನೀಡಿಲ್ಲ, ಅಲ್ಲದೇ ಇದು ಸರ್ಕಾರಿ ಕಾರ್ಯಕ್ರಮ ಆಗಿರೋದ್ರಿಂದ ಯಾವ ರಾಜಕಾರಣಿಗಳ ಭಾವಚಿತ್ರದ ವಸ್ತುಗಳನ್ನು ನೀಡಿಲ್ಲ ಬೇಕಿದ್ರೆ ಪರಿಶೀಲನೆ ನಡೆಸಿ ಎಂದು ನುಣುಚಿಕೊಳ್ಳಲು ಯತ್ನಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ರವರು ತಮ್ಮ ಗಮನಕ್ಕೆ ಇದು ಬಂದಿಲ್ಲ, ವಾಚ್ ಗಳಲ್ಲಿ ಭಾವಚಿತ್ರವಿರುವ ಬಗ್ಗೆ ಮಾಹಿತಿ ಇಲ್ಲ ಈ ಬಗ್ಗೆ ಅಧಿಕಾರಿಗಳ ವಿಚಾರಣೆ ನಡೆಸಿ ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ತಿಳಿಸಿದರು.