Connect with us

Karnataka

ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ರಾಮನಾಥ್ ಕೋವಿಂದ್ ಸಾಧನೆ ಏನು?

Published

on

ನವದೆಹಲಿ: ಎನ್‍ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಹಾರ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿದೆ. ಉತ್ತಮ ಮಾತುಗಾರ, ಆಡಳಿತ ಜ್ಞಾನ, ರಾಜಕೀಯ ಜ್ಞಾನ, ರಾಜ್ಯಸಭೆಯ ಅನುಭವ ಇರುವ ಹಿನ್ನೆಲೆಯಲ್ಲಿ ಕೋವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಆಯ್ಕೆ ಮಾಡಿದ್ದರೂ ರಾಜ್ಯಸಭೆಯಲ್ಲಿ ರಾಮನಾಥ್ ಕೋವಿಂದ್ ಅವರ ಸಾಧನೆ ಏನು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಹೀಗಾಗಿ ಕೋವಿಂದ್ ಅವರು ರಾಜ್ಯಸಭೆಯ ಸಂಸದರಾಗಿದ್ದಾಗ ಅವರ ಸಾಧನೆ ಏನು ಎನ್ನುವುದಕ್ಕೆ ಕೆಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಹಾಜರಿ: ಬಿಹಾರ ಮೂಲದ ರಾಮನಾಥ್ ಕೋವಿಂದ್ 1994 ರಿಂದ 2000 ಹಾಗೂ 2000 ರಿಂದ 2006 ದವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. 12 ವರ್ಷಗಳ ಸಂಸತ್ ಅವಧಿಯಲ್ಲಿ ನಡೆದ ಕಲಾಪಗಳಿಗೆ ಇವರು 87% ರಷ್ಟು ಹಾಜರಿ ಹಾಕಿದ್ದಾರೆ. ಮೊದಲನೆ ಅವಧಿಯಲ್ಲಿ 89% ಹಾಗೂ ಎರಡನೇ ಅವಧಿಯಲ್ಲಿ 85% ರಷ್ಟು ಹಾಜರಿ ಹಾಕಿರುವುದು ಇವರ ವಿಶೇಷತೆ. ಒಟ್ಟು 44 ಅಧಿವೇಶನಕ್ಕೆ ಹಾಜರಾಗಿದ್ದು ಕೋವಿಂದ್ 14 ಅಧಿವೇಶನಗಳಿಗೆ 100% ರಷ್ಟು ಹಾಜರಿ ಹಾಕಿದ್ದಾರೆ. 28 ಅಧಿವೇಶನಗಳಲ್ಲಿ 90% ರಷ್ಟು ಹಾಜರಿ ಹಾಕಿದ್ದಾರೆ.

283 ಪ್ರಶ್ನೆಗಳು: 12 ವರ್ಷಗಳಲ್ಲಿ ಕೋವಿಂದ್ 34 ಸಚಿವಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 283 ಪ್ರಶ್ನೆಗಳನ್ನು ಕೇಳಿದ್ದಾರೆ. ಹಣಕಾಸು ಮತ್ತು ರೈಲ್ವೇ ಇಲಾಖೆಗೆ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನೂ 10 ಕ್ಕಿಂತ ಹೆಚ್ಚು ಪ್ರಶ್ನೆಗಳನ್ನು 12 ಇಲಾಖೆಗಳಿಗೆ ಕೇಳಿದ್ದಾರೆ.

ಹಣಕಾಸು ಇಲಾಖೆಗೆ ಕೇಳಿದ ಪ್ರಶ್ನೆಗಳ ಪೈಕಿ, ಬ್ಯಾಂಕ್ ಗಳಲ್ಲಿ ಸಫಾಯಿ ಕರ್ಮಚಾರಿಗಳ ನೇಮಕ, 1000 ರೂ. ನೋಟ್‍ನಲ್ಲಿ ಡಾ.ಅಂಬೇಡ್ಕರ್‍ರವರ ಭಾವಚಿತ್ರವನ್ನು ಪ್ರಕಟಿಸುವ ಬಗ್ಗೆ, ಕಪ್ಪು ಹಣವನ್ನು ನಿಗ್ರಹಿಸಲು ತೆಗೆದುಕೊಂಡ ಕ್ರಮ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಎಸ್‍ಸಿ/ಎಸ್‍ಟಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತಂತೆ ಕೇಳಿದ್ದಾರೆ.

ಹೆಚ್ಚಿನ ಪ್ರಶ್ನೆಗಳು ರೈಲ್ವೆ ಸಚಿವರಿಗೆ ಮತ್ತು ನಿಲ್ದಾಣಗಳ ಬಗ್ಗೆ ಕೇಳಿದ್ದಾರೆ. ಅದಷ್ಟೇ ಅಲ್ಲದೆ ಉತ್ತರ ಪ್ರದೇಶದಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹಣಕಾಸು ದುರುಪಯೋಗವಾಗಿರುವುದರ ಬಗ್ಗೆ, ಎಸ್‍ಸಿ/ಎಸ್‍ಟಿ ಮತ್ತು ಎಎಸ್/ಎಸ್‍ಟಿ ವರ್ಗಗಳಲ್ಲಿ ಬರುವ ಉಳಿದ ಜಾತಿಗಳ ಅಭಿವೃದ್ಧಿ ಕಲ್ಯಾಣದ ಬಗ್ಗೆ ಸಮಾಜದ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೂ ಪ್ರಶ್ನೆಗಳನ್ನು ಕೇಳಿದ್ದಾರೆ. ಎಸ್‍ಸಿ ಮತ್ತು ಎಸ್‍ಟಿ ಅವರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಶ್ನೆಗಳನ್ನು 12 ವರ್ಷದ ಅವಧಿಯಲ್ಲಿ ಕೇಳಿದ್ದಾರೆ.

ಉಲ್ಲೇಖ ಮತ್ತು ಭರವಸೆಗಳು: 12 ವರ್ಷದ ಅವಧಿಯಲ್ಲಿ ಅವರುÀ 5 ಬಾರಿ ವಿಶೇಷ ಪ್ರಕರಣಗಳನ್ನು ಪ್ರಸ್ತಾಪಿಸಿ ಸಂಸದರ ಗಮನವನ್ನು ಸೆಳೆದಿದ್ದಾರೆ. ಅವುಗಳಲ್ಲಿ ಬಿಹಾರ್‍ನ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಎಸ್‍ಸಿ ವರ್ಗದ ಸಾಲಿನಲ್ಲಿ ಬರುವ ತಂತಿ ಎಂಬ ಜಾತಿಯ ಬಗ್ಗೆ, ಬಿಹಾರ್‍ನ ಜೈಲಿನಲ್ಲಿ ಖೈದಿಗಳೊಂದಿಗೆ ತಪ್ಪಾಗಿ ನಡೆದುಕೊಳ್ಳುವುದು, ನೇಕಾರರ ಸಮಸ್ಯೆಗಳು ಹಾಗೂ ಟಿನ್ಸುಕಿಯಾದ ಗುಂಡಿನ ದಾಳಿಯ ಬಗ್ಗೆ ವಿಶೇಷವಾಗಿ ಅವರ ಮಾತಿನಲ್ಲಿ ಉಲ್ಲೇಖಿಸಿದ್ದಾರೆ.

ಅವರು ಒಟ್ಟು ಏಳು ಭರವಸೆಗಳನ್ನು ಜನರಿಗೆ ನೀಡಿದ್ದು ಅದರಲ್ಲಿ ಆರು ಭರವಸೆಗಳನ್ನು ಈಡೇರಿಸಿದ್ದಾರೆ. ಎನ್‍ಡಿಎ ಸರ್ಕಾರದಲ್ಲಿ 2, ಬೇರೆ ಸರ್ಕಾರದಲ್ಲಿ ಉಳಿದ 4 ಭರವಸೆಗಳನ್ನು ಪೂರ್ಣಗೊಳಿಸಿದ್ದಾರೆ.

ಚರ್ಚೆಗಳು: ರಾಮನಾಥ್ ಕೋವಿಂದ್‍ರವರು ಒಟ್ಟು 89 ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದು ರಾಜ್ಯಸಭಾ ವೆಬ್‍ಸೈಟ್ ಹೇಳಿದೆ. 16 ಸಂದರ್ಭಗಳಲ್ಲಿ ಹಲವಾರು ಸಮಿತಿಗಳ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. 15 ಬಾರಿ ಇವರು ಉಲ್ಲೇಖ ಮಾಡಿರುವ ವಿಚಾರಗಳ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದರೆ, 14 ಸಂದರ್ಭಗಳಲ್ಲಿ ಕರಡು ಮಸೂದೆಯ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ. ಬಜೆಟ್ ವಿಚಾರವಾಗಿ 2 ಬಾರಿ ಚರ್ಚೆಯಲ್ಲಿ ಭಾಗವಹಿಸಿದ್ದರೆ, ಖಾಸಗಿ ಸದಸ್ಯರ ನಿರ್ಣಯಗಳು ಮತ್ತು ಮಸೂದೆಗಳ ವಿಚಾರವಾಗಿ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.

ಅನುದಾನ ಬಳಕೆ: 12 ವರ್ಷ ರಾಜ್ಯಸಭಾ ಸದಸ್ಯರಾಗಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ (ಎಂಪಿಎಲ್‍ಎಡಿ) ಅಡಿ 20 ಕೋಟಿ ಹಣ ರೂ. ಹಣ ಇವರಿಗೆ ಸಿಕ್ಕಿತ್ತು. ಸಿಕ್ಕಿದ ಅನುದಾನದಲ್ಲಿ 19.19 ಕೋಟಿ ರೂ. ಹಣವನ್ನು ಕೋವಿಂದ್‍ರವರು ಅಭಿವೃದ್ಧಿ ಕಾರ್ಯಗಳಿಗೆ ಬಳಸಿದ್ದಾರೆ. ಅನುದಾನ ನೀಡಿದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುವ ಮೂಲಕ ಪ್ರಾಮಾಣಿಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಸಮಿತಿಯ ಸದಸ್ಯರಾಗಿ: ರಾಮನಾಥ್ ಕೋವಿಂದ್‍ರವರು 12 ವರ್ಷಗಳ ಅವಧಿಯಲ್ಲಿ ಹಲವಾರು ಸಮಿತಿಯ ಸದಸ್ಯರಾಗಿದ್ದಾರೆ, ಮುಖ್ಯವಾಗಿ ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ಸಮಿತಿ, ಗೃಹ ವ್ಯವಹಾರದ ಸಮಿತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಮಿತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ, ಕಾನೂನು ಮತ್ತು ನ್ಯಾಯ ಸಮಿತಿ, ರಾಜ್ಯಸಭಾ ಸಮಿತಿಯ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ:ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ಚಾಲೆಂಜ್ ಎಸೆದು ಗೆದ್ದ ಅಮಿತ್ ಶಾ
ಇದನ್ನೂ ಓದಿ :ರಾಮನಾಥ್ ಕೋವಿಂದ್‍ಗೆ ಇದೆ ಕಲಬುರಗಿಯ ನಂಟು: ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಮೋದಿ ಹೊಡೆದಿದ್ದು ಹೇಗೆ..?

ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

 

 

 

Click to comment

Leave a Reply

Your email address will not be published. Required fields are marked *