Connect with us

Karnataka

ರಾಮನಾಥ್ ಕೋವಿಂದ್‍ಗೆ ಇದೆ ಕಲಬುರಗಿಯ ನಂಟು: ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಮೋದಿ ಹೊಡೆದಿದ್ದು ಹೇಗೆ..?

Published

on

ನವದೆಹಲಿ: ರಾಮನಾಥ್ ಕೋವಿಂದ್ ಅವರನ್ನು ದೇಶದ ಪ್ರಥಮ ಪ್ರಜೆಯನ್ನಾಗಿ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.

ಹೌದು. 2007ರಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರತಿಭಾ ಪಾಟೀಲ್ ಅವರನ್ನು ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮಾಡಿ ಸೋನಿಯಾ ಗಾಂಧಿ ವಿಪಕ್ಷಗಳಿಗೆ ಶಾಕ್ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಎನ್‍ಡಿಎ ಮಿತ್ರಪಕ್ಷ ಶಿವಸೇನೆ ಪ್ರತಿಭಾ ಪಾಟೀಲ್ ಮರಾಠಿ ಸಮುದಾಯದವರು ಎಂದು ಹೇಳಿ ಬೆಂಬಲ ನೀಡಿತ್ತು. ಮೊದಲ ಮಹಿಳಾ ರಾಷ್ಟ್ರಪತಿ ಎನ್ನುವ ಕಾರಣಕ್ಕಾಗಿ ಹಲವು ಪಕ್ಷಗಳು ಯುಪಿಎಯನ್ನು ಬೆಂಬಲಿಸಿತ್ತು.

ಈಗ ಮೋದಿ ಕೂಡ ಸೋನಿಯಾ ಅವರ ತಂತ್ರವನ್ನೇ ಅವರ ಮೇಲೆ ಪ್ರಯೋಗಿಸಿ ಯುಪಿಎ ಮೈತ್ರಿಕೂಟದ ಮತವನ್ನು ಪಡೆಯಲು ಮುಂದಾಗಿದ್ದು, ದಲಿತ ಅಭ್ಯರ್ಥಿಯನ್ನು ಇಳಿಸುವ ಮೂಲಕ ವಿಪಕ್ಷಗಳಿಗೆ ಭರ್ಜರಿ ಹೊಡೆತ ಕೊಟ್ಟಿದ್ದಾರೆ.

ಮೋದಿ ಮಾಸ್ಟರ್ ಸ್ಟ್ರೋಕ್ ಹೇಗೆ?
ರಾಮನಾಥ್ ಅವರು ಕ್ಲೀನ್ ಇಮೇಜ್ ಹೊಂದಿರುವುದು ಬಿಜೆಪಿಗೆ ವರದಾನವಾಗಿದ್ದು, ದಲಿತ ಅಭ್ಯರ್ಥಿಯನ್ನ ವಿರೋಧಿಸಿದರೆ ಕಾಂಗ್ರೆಸ್ ಗೆ ಮತ್ತಷ್ಟು ನಷ್ಟ ಗ್ಯಾರಂಟಿ ಎಂದೇ ವಿಶ್ಲೇಷಿಸಲಾಗುತ್ತದೆ. ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ದಲಿತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಮುಂದಾಗಲಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಹರಿದಾಡುತಿತ್ತು. ಈಗ ದಲಿತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿದ ಕಾರಣ ಕಾಂಗ್ರೆಸ್ ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಎದ್ದಿದೆ.

ಕೋವಿಂದ್ ಪಕ್ಕಾ ಆರೆಸ್ಸಿಸಿಗ ಆಗಿರುವ ಕಾರಣ ಸಂಘ ಪರಿವಾರವೂ ಈ ಆಯ್ಕೆಯನ್ನು ವಿರೋಧಿಸುವುದಿಲ್ಲ. ಹೀಗಾಗಿ ಮೋದಿಯ ಈ ಆಯ್ಕೆಗೆ ಆರ್‍ಎಸ್‍ಎಸ್ ವಲಯದಲ್ಲೂ ಒಪ್ಪಿಗೆಯ ಮುದ್ರೆ ಸಿಕ್ಕಿದೆ.

ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳು ದೇಶದಲ್ಲೇ ಹೆಚ್ಚು ಇರುವುದು ಉತ್ತರಪ್ರದೇಶದಲ್ಲಿ. ರಾಮನಾಥ್ ಅವರು ಉತ್ತರ ಪ್ರದೇಶ ಮೂಲದವರಾಗಿರುವ ಕಾರಣ ಈ ರಾಜ್ಯದ ಪ್ರಬಲ ಪಕ್ಷಗಳಾದ ಬಿಎಸ್‍ಪಿ ಮತ್ತು ಎಸ್‍ಪಿಗೆ ಧರ್ಮ ಸಂಕಟ ಎದುರಾಗಿದೆ. ಅಷ್ಟೇ ಅಲ್ಲದೇ ಉತ್ತರಪ್ರದೇಶದಲ್ಲಿ ದಲಿತರ ಸಂಖ್ಯೆಯೇ ಹೆಚ್ಚು. ಒಂದು ವೇಳೆ ವಿರೋಧಿಸಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಪಕ್ಷಗಳ ವಿರುದ್ಧವೇ ಇದೇ ವಿಚಾರವನ್ನು ಹಿಡಿದುಕೊಂಡು ರಾಜ್ಯದ ದಲಿತ ಅಭ್ಯರ್ಥಿಯನ್ನು ನೇಮಿಸಲು ವಿರೋಧಿಸಿತ್ತು ಎಂದು ಪ್ರಚಾರ ನಡೆಸಲೂಬಹುದು. ಹೀಗಾಗಿ ಈ ಎರಡು ಪಕ್ಷಗಳು ಕೋವಿಂದ್ ಅವರನ್ನು ವಿರೋಧಿಸುವ ಸಾಧ್ಯತೆ ಕಡಿಮೆ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. ಕೋವಿಂದ್ ಅವರ ಹೆಸರು ಪ್ರಕಟವಾದ ಬಳಿಕ ಮಾಯಾವತಿ ಮಾತನಾಡಿದ್ದು, ರಾಷ್ಟ್ರಪತಿ ಅಭ್ಯರ್ಥಿ ದಲಿತರಾಗಿದ್ದರೆ ಅವರನ್ನು ನಾವು ವಿರೋಧಿಸುವುದಿಲ್ಲ, ರಾಮನಾಥ್ ಅವರು ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದು ಎನ್‍ಡಿಎಗೆ ಪ್ಲಸ್ ಪಾಯಿಂಟ್ ಆಗಿದೆ.

ಬಿಹಾರದಲ್ಲೂ ದಲಿತರೇ ಹೆಚ್ಚು ಇರುವ ಕಾರಣ ಆರ್‍ಜೆಡಿ ವಿರೋಧಿಸುತ್ತಾ ಅಥವಾ ಬೆಂಬಲಿಸುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಮನಾಥ್ ಕೋವಿಂದ್ ಆಯ್ಕೆಯನ್ನು ಸ್ವಾಗತಿಸಿ, ರಾಜ್ಯಪಾಲರಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ವೈಯಕ್ತಿಕವಾಗಿ ನನಗೆ ಸಂತೋಷವಾಗಿದೆ. ಆದರೆ ಎನ್‍ಡಿಎ ಈ ನಿರ್ಧಾರವನ್ನು ಬೆಂಬಲಿಸಬೇಕೇ ಎನ್ನುವುದನ್ನು ಈಗಲೇ ಹೇಳಲಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲ ತಿಂಗಳಿನಿಂದ ನಿತೀಶ್ ಮತ್ತು ಮೋದಿ ಸಂಬಂಧ ಉತ್ತಮವಾಗಿ ಇರುವ ಕಾರಣ ಜೆಡಿಯು ಎನ್‍ಡಿಎ ನಿರ್ಧಾರವನ್ನು ವಿರೋಧಿಸಲಾರದು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

 

ಒಂದು ವೇಳೆ ಮಿತ್ರಪಕ್ಷಗಳ ಸಹಕಾರವನ್ನು ಪಡೆದು ರಾಮನಾಥ್ ಕೋವಿಂದ್ ಅವರನ್ನು ಎನ್‍ಡಿಎ ರಾಷ್ಟ್ರಪತಿಯನ್ನಾಗಿ ನೇಮಿಸಿದರೆ ಕೆ.ಆರ್.ನಾರಾಯಣ್ ಬಳಿಕ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ವ್ಯಕ್ತಿ ಇವರಾಗಲಿದ್ದಾರೆ. ಈ ಮೂಲಕ ದೇಶದ ದಲಿತ ಸಮುದಾಯದ ಮತ ಬ್ಯಾಂಕ್‍ಗೆ ಮೋದಿ ಗಾಳ ಹಾಕಿದ್ದು, ಇದು 2019ರ ಲೋಕಸಭಾ ಚುನಾವಣೆ ವೇಳೆ ಎನ್‍ಡಿಎಯತ್ತ ದಲಿತರನ್ನು ಸೆಳೆಯಲು ಭಾರೀ ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತದೆ.

ಕಲಬುರಗಿಗೆ ಇದೆ ಸಂಬಂಧ: ರಾಮನಾಥ ಕೋವಿಂದ್ ಅವರಿಗೂ ಕಲಬುರಗಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ರಾಮನಾಥ ಅವರು ಕಲಬುರಗಿಗೆ ದಶಕಗಳಿಂದ ಹಲವು ಬಾರಿ ಭೇಟಿ ನೀಡಿದ್ದಾರೆ. ಬಿಜೆಪಿ ಪಕ್ಷ ಸಂಘಟನೆ ಜೊತೆಗೆ ಕೋಳಿ ಸಮಾಜದ ಸಂಘಟನೆಗೂ ಸಹ ರಾಮನಾಥ ಒತ್ತು ನೀಡಿದ್ದರು. ಇದೀಗ ಅವರೇ ಭಾರತದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವುದು   ಸಮುದಾಯದ ಜನರಲ್ಲಿ ಸಂತಸ ತಂದಿದೆ.

ರಾಮನಾಥ್ ಕೋವಿಂದ್ ಯಾರು?
ಬಿಹಾರದ ಹಾಲಿ ರಾಜ್ಯಪಾಲರಾಗಿರುವ ರಾಮನಾಥ್ ಕೋವಿಂದ್, ಉತ್ತರಪ್ರದೇಶದ ಕಾನ್ಪುರದ ದೆರಾಪುರ್‍ನಲ್ಲಿ ಅಕೋಬರ್ 1, 1945ರಲ್ಲಿ ಜನಿಸಿದರು. ಕಾನ್ಪುರ ವಿವಿಯಿಂದ ವಾಣಿಜ್ಯ ಮತ್ತು ಕಾನೂನು ಪದವಿ ಪಡೆದ ಇವರು 1971ರಿಂದ ದೆಹಲಿಯಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು.

1977-79ರಲ್ಲಿ ದೆಹಲಿ ಹೈಕೋರ್ಟ್‍ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದ ಇವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 1978ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು. 1980-93ರವರೆಗೆ ಸುಪ್ರೀಂಕೋರ್ಟ್‍ನಲ್ಲಿ ಕೇಂದ್ರ ಸರ್ಕಾರದ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದರು.

ಕರ್ನಾಟಕದ ಕಲಬುರಗಿ ಜಿಲ್ಲೆಯ ದಲಿತ ಪ್ರಕರಣದಲ್ಲೂ ವಾದ ಮಂಡಿಸಿದ್ದ ಕೋವಿಂದ್ ಹಲವು ಸಂಸದೀಯ ಸಮಿತಿಗಳಲ್ಲಿ ಸೇವೆ, ಬಿಜೆಪಿ ವಕ್ತಾರ ಹುದ್ದೆಯನ್ನು ನಿಭಾಯಿಸಿದ್ದರು. ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಇವರು 1990ರಲ್ಲಿ ಘಾಟಂಪುರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 1994ರಿಂದ 2006ರವರೆಗೆ ಎರಡು ಬಾರಿ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಬಿಜೆಪಿ ದಲಿತ ಮೋರ್ಚಾದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2015ರ ಆಗಸ್ಟ್ 8 ರಂದು ಬಿಹಾರ ರಾಜ್ಯಪಾಲರಾಗಿ ಮೋದಿ ಸರ್ಕಾರ ರಾಮನಾಥ್ ಕೋವಿಂದ್ ಅವರನ್ನು ನೇಮಿಸಿತು.

Click to comment

Leave a Reply

Your email address will not be published. Required fields are marked *