51 ಇಂಚು ಎತ್ತರ, 1.5 ಟನ್ ತೂಕ ಇರಲಿದೆ ಅಯೋಧ್ಯೆ ರಾಮನ ವಿಗ್ರಹ

Public TV
2 Min Read
ayodhya ram mandir

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ರಾಮಜನ್ಮಭೂಮಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ರಾಮನ ವಿಗ್ರಹವು 51 ಇಂಚು ಎತ್ತರ ಇರಲಿದ್ದು, ಬರೋಬ್ಬರಿ 1.5 ಟನ್‌ ತೂಕ ಹೊಂದಿದೆ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

RAMA IDOL

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ 4 ದಿನ ಮುನ್ನ ಅಂದರೆ ಜ.18 ರಂದೇ ಗರ್ಭಗುಡಿಗೆ ಶ್ರೀರಾಮನ ಪ್ರವೇಶ ಆಗಲಿದೆ. ಅಲ್ಲದೆ ರಾಮನ ಕಪ್ಪು ಬಣ್ಣದ ವಿಗ್ರಹವು 51 ಇಂಚು ಎತ್ತರ, 1.5 ಟನ್ ತೂಕ ಹೊಂದಿದೆ. ಮುಖ 5 ವರ್ಷದ ಮಗುವಿನಷ್ಟೇ ಮುಗ್ಧತೆಯನ್ನು ಹೊಂದಿದೆ. ಪ್ರತಿ ವರ್ಷ ರಾಮ ನವಮಿಯಂದು ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ತಾರೀಖಿನಂದು ಮಧ್ಯಾಹ್ನ 12 ಗಂಟೆಗೆ ಸೂರ್ಯ ಸ್ವತಃ ತನ್ನ ಕಿರಣಗಳ ಮೂಲಕ ಶ್ರೀರಾಮನ ಹಣೆಯನ್ನು ಸ್ಪರ್ಶಿಸಲಿದ್ದಾನೆ ಎಂದು ಅವರು ವಿವರಿಸಿದರು.

ಜ.16 ರಿಂದ ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಲಿವೆ. ಜ.18 ರಂದು ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹ ಇರಿಸಲಾಗುವುದು. ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳ ಸಲಹೆಯ ಮೇರೆಗೆ ಭಗವಾನ್ ಶ್ರೀರಾಮನ ವಿಗ್ರಹದ ಉದ್ದ ಮತ್ತು ಅದರ ಸ್ಥಾಪನೆಯ ಎತ್ತರವನ್ನು ವಿನ್ಯಾಸಗೊಳಿಸಲಾಗಿದೆ. ಮೂವರು ಶಿಲ್ಪಿಗಳು ಶ್ರೀರಾಮನ ವಿಗ್ರಹವನ್ನು ಪ್ರತ್ಯೇಕವಾಗಿ ತಯಾರಿಸಿದ್ದು, ಅದರಲ್ಲಿ 1.5 ಟನ್ ತೂಕದ ಮತ್ತು ಪಾದದಿಂದ ಹಣೆಯವರೆಗೆ 51 ಇಂಚು ಉದ್ದದ ಒಂದು ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಮುಖದ ಮೃದುತ್ವ, ಕಣ್ಣುಗಳಲ್ಲಿನ ನೋಟ, ನಗು, ದೇಹ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕಪ್ಪು ಶಿಲೆಯ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಪ್ರತಿಮೆಯ ಮೇಲೆ ತಲೆ, ಕಿರೀಟವನ್ನು ಸಹ ಉತ್ತಮವಾಗಿ ರಚಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: Ram Mandir; ರಾಮಮಂದಿರ ಉದ್ಘಾಟನೆಯ ಕೇಂದ್ರಬಿಂದು ಗರ್ಭಗುಡಿ ವಿಶೇಷತೆ ನಿಮಗೆಷ್ಟು ಗೊತ್ತು?

ನೀರು ಹಾಗೂ ಪಂಚಾಮೃತ ಅಭಿಷೇಕ ಮಾಡಿದರೂ ವಿಗ್ರಹದ ಕಲ್ಲಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಅಲ್ಲದೆ ವಿಗ್ರಹದ ಅಭಿಷೇಕದಿಂದ ತೆಗೆದ ತೀರ್ಥ ಹಾಗೂ ಪಂಚಾಮೃತ ಸೇವಿಸಿದರೆ ಯಾರ ದೇಹದ ಮೇಲೂ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ರಾಯ್ ಸ್ಪಷ್ಟಪಡಿಸಿದರು.

Share This Article