ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

Public TV
1 Min Read
Ayodhya Ram Lalla

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನನ್ನು ‘ಬಾಲಕ ರಾಮ’ (Balak Ram) ಎಂದು ಕರೆಯಲಾಗುವುದೆಂದು ಪ್ರತಿಷ್ಠಾಪನೆಯ ಅರ್ಚಕ ಅರುಣ್‌ ದೀಕ್ಷಿತ್‌ (Arun Dixit) ಮಾಹಿತಿ ನೀಡಿದ್ದಾರೆ.

ಶ್ರೀರಾಮಜನ್ಮಭೂಮಿ ದೇವಸ್ಥಾನದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯ ಅರ್ಚಕರಾಗಿದ್ದರು ಅರುಣ್‌ ದೀಕ್ಷಿತ್‌. 51 ಇಂಚು ಎತ್ತರದ ಭಗವಾನ್ ರಾಮಲಲ್ಲಾನ ವಿಗ್ರಹವನ್ನು ‘ಬಾಲಕ ರಾಮ’ ಎಂದು ಹೆಸರಿಡಲಾಗಿದೆ. ಇದು ರಾಮನ ಮಗುವಿನ ರೂಪವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

ram lalla narendra modi puja

ಜನವರಿ 22 ರಂದು ಪ್ರತಿಷ್ಠಾಪನೆಯಾದ ಶ್ರೀರಾಮನ ವಿಗ್ರಹಕ್ಕೆ ‘ಬಾಲಕ ರಾಮ’ ಎಂದು ಹೆಸರಿಡಲಾಗಿದೆ. ಈ ಹೆಸರಿಡಲು ಪ್ರಮುಖ ಕಾರಣವೆಂದರೆ, ವಿಗ್ರಹವು ಐದು ವರ್ಷ ವಯಸ್ಸಿನ ಮಗುವಿನ ರೂಪದ ಮಾದರಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾನ ವಿಗ್ರಹವನ್ನು ಕೆತ್ತಿದ್ದಾರೆ. ಮೈಸೂರಿನ ಹೆಚ್‌.ಡಿ.ಕೋಟೆ ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದಿಂದ ಶಿಲ್ಪಕ್ಕೆ ಬಳಸಲಾದ ನೀಲಿ ಬಣ್ಣದ ಕೃಷ್ಣ ಶಿಲೆಯನ್ನು (ಕಪ್ಪು ಶಿಲೆ) ಹೊರತೆಗೆಯಲಾಗಿತ್ತು. ಸೋಪ್‌ಸ್ಟೋನ್ ಎಂದು ಪ್ರಸಿದ್ಧವಾದ ಆಕಾಶ-ನೀಲಿ ಮೆಟಾಮಾರ್ಫಿಕ್ ಬಂಡೆಯು ವಿಗ್ರಹಗಳನ್ನು ಕೆತ್ತಲು ಶಿಲ್ಪಿಗಳಿಗೆ ಉತ್ತಮ ಆಯ್ಕೆಯಾಗಿದೆ. ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ, ಆರತಿ ಸಮಯ, ಭಗವಾನ್ ರಾಮನಿಗೆ ಅರ್ಪಣೆ ಮತ್ತು ಇತರ ಕಾರ್ಯವಿಧಾನಗಳನ್ನು ದೇವಾಲಯದಲ್ಲಿ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

ಸೋಮವಾರ (ಜ.22) ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಗಣ್ಯರು ಅಯೋಧ್ಯೆಯಲ್ಲಿ ನೆರೆದಿದ್ದರು. ರಾಮಲಲ್ಲಾನನ್ನು ಕಣ್ತುಂಬಿಕೊಂಡು ಪುನೀತರಾದರು.

Share This Article