– ಒಂದೇ ದಿನಕ್ಕೆ ಕೋಟಿ ಒಡೆಯನಾದ ಅಯೋಧ್ಯೆ ರಾಮಲಲ್ಲಾ
– ಪ್ರತಿ ಸೋಮವಾರ ಮಂದಿರದ ಹುಂಡಿ ಎಣಿಕೆ ಕಾರ್ಯ
ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಾದ ನಂತರದ ಮೊದಲ ದಿನವಾದ ಮಂಗಳವಾರ ರಾಮಲಲ್ಲಾಗೆ (Ram Lalla) ಆನ್‌ಲೈನ್‌ನಲ್ಲಿ 3 ಕೋಟಿ 17 ಲಕ್ಷ ರೂ. ಕಾಣಿಕೆ ಹರಿದುಬಂದಿದೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಮಾತನಾಡಿ, ಪ್ರಾಣ ಪ್ರತಿಷ್ಠೆಯ ದಿನದಂದು 10 ದೇಣಿಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಇದಲ್ಲದೆ, ದೇಶ ಮತ್ತು ಪ್ರಪಂಚದಾದ್ಯಂತದ ಅನೇಕ ಭಕ್ತರು ಶ್ರೀರಾಮನಿಗೆ ಆನ್‌ಲೈನ್ ದೇಣಿಗೆಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ: ಧನ್ಯವಾದಗಳು ಅಯೋಧ್ಯೆ – ಧರ್ಮಭೂಮಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ ಮೈಸೂರಿನ ಶಿಲ್ಪಿ
ಮಂಗಳವಾರ 5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಬುಧವಾರ ಅಷ್ಟೇ ಸಂಖ್ಯೆಯಲ್ಲಿ ಭೇಟಿ ನೀಡಿದರು. ಮಂಗಳವಾರ ಆನ್‌ಲೈನ್‌ನಲ್ಲಿ 3.17 ಕೋಟಿ ರೂ. ಕಾಣಿಕೆ ಬಂದಿದೆ. ಬುಧವಾರ ಪಡೆದ ಮೊತ್ತವನ್ನು ಮರುದಿನ ಕೋಷ್ಟಕದ ನಂತರ ಬಹಿರಂಗಪಡಿಸಲಾಗುವುದು ಎಂದು ಮಿಶ್ರಾ ಅವರು ತಿಳಿಸಿದ್ದಾರೆ.
ಪ್ರತಿ ಸೋಮವಾರ ಮಂದಿರದ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ರಾಮಮಂದಿರ ಆವರಣದಲ್ಲಿ 10 ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಪ್ರಾಣ ಪ್ರತಿಷ್ಠಾಪನೆ ದಿನ ದೇಣಿಗೆ ಸ್ವೀಕರಿಸಲು 10 ಕೌಂಟರ್ ಶುರು ಮಾಡಲಾಗಿತ್ತು. ಇದರ ಲೆಕ್ಕ ಇನ್ನಷ್ಟೇ ಸಿಗಬೇಕಿದೆ. ದೇವಸ್ಥಾನದಲ್ಲಿ ದರ್ಶನವನ್ನು ವ್ಯವಸ್ಥಿತವಾಗಿ ಮಾಡಲು ಆಡಳಿತದೊಂದಿಗೆ ಸಮಾಲೋಚಿಸಿ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ದೇವಶಿಲ್ಪಿ ಅರುಣ್ ಯೋಗಿರಾಜ್ ಅಯೋಧ್ಯೆಯಿಂದ ತಾಯ್ನಾಡಿಗೆ ಆಗಮನ – ರಾಮಭಕ್ತರಿಂದ ಭವ್ಯ ಸ್ವಾಗತ, ಮೊಳಗಿದ ‘ಜೈ ಶ್ರೀರಾಮ್’ ಘೋಷಣೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಟ್ರಸ್ಟ್‌ನ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಯೋಧ್ಯೆಯ ಸುತ್ತಮುತ್ತಲಿನ ಸಂಘದ ಕಾರ್ಯಕರ್ತರಿಗೆ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳಲು ಮತ್ತು ಸುವ್ಯವಸ್ಥಿತ ದೇವಾಲಯ ದರ್ಶನಕ್ಕೆ ಸಹಕರಿಸುವಂತೆ ಸೂಚನೆ ನೀಡಿದ್ದಾರೆ.