ಇತ್ತೀಚೆಗೆ ಸ್ಟಾರ್ ನಟರ ಮೇಲೆ ನಂಬಿಕೆಯಿಂದ ಕೋಟಿ ಕೋಟಿ ಸುರಿಯಲಾಗುತ್ತೆ. ಪ್ಯಾನ್ ಇಂಡಿಯಾ (Pan India) ಕಾನ್ಸೆಪ್ಟ್ ಹೆಸರಲ್ಲಿ ಕೋಟಿ ರೂಪಾಯಿಗಳು ನೂರು ಕೋಟಿ ಗಡಿಯನ್ನು ಸುಲಭವಾಗಿ ದಾಟಿ ನಿರ್ಮಾಪಕರ ಕೈ ಚೆಲ್ಲಿ ಹೋಗುತ್ತೆ. ಆದರೆ ಅದೆಷ್ಟೋ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದ ಬಳಿಕ ಲಾಭ ಇರಲಿ ಕನಿಷ್ಟ ಪಕ್ಷ ಹಾಕಿದ ಕಾಸಿಗೂ ಬರಕತ್ತಾಗುವುದಿಲ್ಲ.
ನಟರು, ನಿರ್ದೇಶಕರು, ತಂತ್ರಜ್ಞರು ಅವರವರ ಕಾಸು ಪಡೆದು ಬೇರೆ ಚಿತ್ರದ ಕಡೆ ಮುಖ ಮಾಡ್ತಾರೆ. ಅವರ ಮೇಲೆ ಆ ಸಿನಿಮಾ ಆರ್ಥಿಕ ನಷ್ಟವನ್ನಂತೂ ಮಾಡೋದಿಲ್ಲ. ಆದರೆ ಬಿಗ್ ಬಜೆಟ್ ಸಿನಿಮಾಕ್ಕಾಗಿ ಕೋಟಿ ಕೋಟಿ ಬಂಡವಾಳ ಹಾಕಿ ಲಾಭದ ಕನಸು ಕಂಡು ಹಣವನ್ನ ನೀರಿನಂತೆ ಖರ್ಚು ಮಾಡುವ ನಿರ್ಮಾಪಕ ಮಾತ್ರ ಅಕ್ಷರಶಃ ಬೀದಿಗೆ ಬರುತ್ತಾನೆ. ಆ ಕ್ಷಣಕ್ಕೆ ಆತ ತನ್ನ ನೋವನ್ನ ಸಾರ್ವಜನಿಕವಾಗಿ ಹಂಚಿಕೊಳ್ಳದಿದ್ದರೂ ಒಂದಲ್ಲ ಒಂದುದಿನ ಹತಾಶೆಯಲ್ಲಿ ನೊಂದು ಬೆಂದ ಆತನ ಸಹನೆಯ ಕಟ್ಟೆ ಒಡೆದುಹೋಗುತ್ತೆ. ಇದೀಗ ಟಾಲಿವುಡ್‌ನ (Tollywood) ಖ್ಯಾತ ನಿರ್ಮಾಪಕ ದಿಲ್‌ರಾಜು (Dil Raju) ಇಂಥದ್ದೇ ಸೋಲಿನ ಕಥೆಯನ್ನ ಹೊರಹಾಕಿದ್ದು ರಾಮ್‌ಚರಣ್ ನಟನೆಯ ಚಿತ್ರದ ಅಸಲಿ ಸತ್ಯ ಕೊನೆಗೂ ಕಕ್ಕಿದ್ದಾರೆ.
ಅಂದಹಾಗೆ ಈ ದಿಲ್‌ರಾಜು ಟಾಲಿವುಡ್ ಖ್ಯಾತ ಹಾಗೂ ಹಿರಿಯ ನಿರ್ಮಾಪಕ. ಅದೆಷ್ಟೋ ಹಿಟ್ ಸಿನಿಮಾಗಳನ್ನ ಕೊಟ್ಟು ಸಿನಿಮಾದಲ್ಲೇ ಬದುಕು ಕಟ್ಟಿಕೊಂಡು ಅಲ್ಲಿಯೇ ಹಣ ಸುರಿಯುತ್ತಿದ್ದಾರೆ. ಇದೀಗ ಭಾರೀ ನಿರೀಕ್ಷೆಯಲ್ಲಿ ಮಾಡಿದ್ದ ಚಿತ್ರ ತಮ್ಮ ಜೀವನಕ್ಕೆ ಅದೆಂಥಾ ಪಾಠ ಕಲಿಸಿದೆ ಅನ್ನೋದನ್ನ ಈ ನಿರ್ಮಾಪಕ ಖಾಸಗಿ ಯೂಬ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಬಿಟ್ಟಿದ್ದಾರೆ. ಇದನ್ನೂ ಓದಿ: ಎಷ್ಟೇ ದುಡ್ಡು ಕೊಟ್ರೂ `ಆ’ ಕೆಲಸ ಮಾಡಲ್ಲವೆಂದ ರಶ್ಮಿಕಾ!
ಭರ್ತಿ 350-400 ಕೋಟಿ ರೂ.ವರೆಗೆ ಖರ್ಚು ಮಾಡಿ ಬಿಡಿಗಾಸನ್ನೂ ವಾಪಸ್ ಪಡೆಯದ ಚಿತ್ರವೇ ಗೇಮ್ ಚೇಂಜರ್ (Game Changer). ದಕ್ಷಿಣ ಭಾರತದ ಚಿತ್ರರಂಗದ ದ ಗ್ರೇಟ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ಆರ್‌ಆರ್‌ಆರ್ (RRR) ಮೂಲಕ ಭಾರೀ ಬ್ರೇಕ್ ಪಡೆದ ಸೂಪರ್ ಸ್ಟಾರ್ ರಾಮ್‌ಚರಣ್ (Ram Charan) ನಟನೆಯ ಚಿತ್ರ ಇದಾಗಿತ್ತು. ಜನವರಿಯಲ್ಲಿ ರಿಲೀಸ್ ಆಗಿದ್ದ ಚಿತ್ರ ಹೀನಾಯ ಸೋತಿತ್ತು. ಈಗ ಸಿನಿಮಾ ಸೋತಿರುವ ವಿಚಾರವನ್ನ ಖುದ್ದು ನಿರ್ಮಾಪಕ ದಿಲ್‌ರಾಜು ಬಾಯ್ಬಿಟ್ಟಿದ್ದಾರೆ. ಕೋಟಿ ಕೋಟಿ ಹಣ ನಷ್ಟ ಮಾಡಿಕೊಂಡ ನಿರ್ಮಾಪಕ ಆ ಸೋಲಿನಿಂದ ಇನ್ನೂ ಹೊರಬಂದಿಲ್ಲ ಅನ್ನೋದನ್ನ ಹೇಳಿಕೊಂಡಿದ್ದಾರೆ.
ಸಿನಿಮಾಗಳು ಸೋತರೂ ಹೀರೋಗಳ ಮಾರ್ಕೆಟ್ ಬಿದ್ದು ಹೋಗದಿರಲು ಗೆದ್ದಿದೆ ಎಂದು ಹೇಳುವ ಒಂದು ವರ್ಗವಿದೆ. ಆದರೆ ಅಸಲಿಯಾಗಿ ಅದರ ಹೊಡೆತ ಅನುಭವಿಸುವುದು ನಿರ್ಮಾಪಕ, ಹೀಗಾಗಿ ದಿಲ್‌ರಾಜು ರಾಮ್‌ಚರಣ್ ನಟನೆಯ ಗೇಮ್ ಚೇಂಜರ್ ಚಿತ್ರ ರಿಲೀಸ್ ಆಗಿ 6 ತಿಂಗಳ ಬಳಿಕ ಸತ್ಯ ಬಾಯ್ಬಿಟ್ಟಿದ್ದು, ಆ ಚಿತ್ರ ನನಗೆ ದೊಡ್ಡ ಪಾಠ ಕಲಿಸಿದೆ ಎಂದಿದ್ದಾರೆ.
ಸ್ಟಾರ್ ಹೀರೋ ಸ್ಟಾರ್ ನಿರ್ದೇಶಕ ಎಂದ ಮಾತ್ರ ಚಿತ್ರ ಗೆಲ್ಲೋದಿಲ್ಲ. ಚಿತ್ರದಲ್ಲಿ ಸತ್ವ ಇರಬೇಕು ಅನ್ನೋದು ದಿಲ್‌ರಾಜು ಮಾತಿನ ಒಳಾರ್ಥ. ಹೀಗೆ ಸಿನಿಮಾ ಸ್ಟಾರ್ ಸಿನಿಮಾ ಹೆಸರಿನಲ್ಲಿ ಕೈಸುಟ್ಕೊಂಡ ಎಷ್ಟೋ ನಿರ್ಮಾಪಕರಿದ್ದಾರೆ. ದುಡ್ಡು ಮಾಡಿದವರೂ ಇದ್ದಾರೆ. ಆದರೆ ಸತ್ಯ ಹೇಳಲಾರದೇ ಒದ್ದಾಡುವ ಸ್ಥಿತಿ ಅವರಿಗಿದೆ. ಆದರೆ ದಿಲ್‌ರಾಜು ದೊಡ್ಡ ನಿರ್ಮಾಪಕ ಆಗಿರೋದ್ರಿಂದ ಎಲ್ಲವನ್ನೂ ಧಕ್ಕಿಸಿಕೊಳ್ಳುತ್ತಿದ್ದಾರೆ ಅಷ್ಟೇ.