ರಾಖಿ ಹಬ್ಬ (Rakhi Festival) ಬಂತೆಂದರೆ ಸಾಕು ಅಣ್ಣ-ತಂಗಿಯರಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ. ಅಣ್ಣ-ತಂಗಿಯ ಬಾಂಧವ್ಯ ಎಂದರೆ ಅದು ಬೆಲೆಕಟ್ಟಲಾಗದ ಸಂಬಂಧ. ಪ್ರತಿಯೊಬ್ಬ ತಂಗಿಗೆ ಅಣ್ಣ ಶ್ರೀರಕ್ಷೆಯಾಗಿ ನಿಂತರೆ, ತಂಗಿ ಅಣ್ಣನಿಗೆ ಎರಡನೇ ಅಮ್ಮನ ರೀತಿ ಮಮತೆಯನ್ನು ತೋರುತ್ತಾಳೆ. ಇಂತಹ ಪವಿತ್ರ ಬಂಧವನ್ನು ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬದ ಬಳಿಕ ಬರುವ ಮತ್ತೊಂದು ಪವಿತ್ರ ಹಬ್ಬ ಈ ರಕ್ಷಾ ಬಂಧನ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ (Raksha Bandhan) ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದ ಸಂದರ್ಭ ಮಾರುಕಟ್ಟೆಯಲ್ಲಿ ಅನೇಕ ಶೈಲಿಯ ರಾಖಿಗಳು ಕಾಣಸಿಗುತ್ತವೆ. ರಾಖಿ ಅಥವಾ ರಕ್ಷೆಯನ್ನು ಕಟ್ಟುವ ಮೂಲಕ ಪ್ರತಿಯೊಬ್ಬ ಅಣ್ಣ-ತಂಗಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದು ಒಡಹುಟ್ಟಿದವರ ನಡುವಿನ ವಾತ್ಸಲ್ಯ ಮತ್ತು ಪ್ರೀತಿಯನ್ನು ಅಚ್ಚಳಿಯದೆ ಉಳಿಯುವಂತೆ ಮಾಡುತ್ತದೆ.
Advertisement
ಪುರಾಣದ ಕಥೆ:
ಪ್ರತಿಯೊಂದು ಹಬ್ಬವೂ ಪುರಾಣದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ. ಅದೇ ರೀತಿ ರಾಖಿ ಹಬ್ಬ ಅಥವಾ ರಕ್ಷಾ ಬಂಧನದ ಬಗ್ಗೆಯೂ ಪುರಾಣದಲ್ಲಿ ಉಲ್ಲೇಖವಿದೆ. ಭಗವಾನ್ ಕೃಷ್ಣನು ಶಿಶುಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ. ಎಲ್ಲರೂ ಕೈಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಹೋಗುತ್ತಾರೆ. ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಫಲವನ್ನು ನೀಡಿದ ಶ್ರೀಕೃಷ್ಣ ಹಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದವಾಗುವಂತೆ ಮಾಡಿ ದ್ರೌಪದಿಯ ಮಾನ ಕಾಪಾಡುತ್ತಾನೆ.
Advertisement
ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದ್ದಳು. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಭರವಸೆ ನೀಡುತ್ತಾನೆ.
Advertisement
Advertisement
ಇನ್ನೊಂದು ಕಥೆಯೆಂದರೆ, ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ. ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ.
ಮತ್ತೊಮ್ಮೆ ರಾಕ್ಷಸರಿಗೂ, ದೇವತೆಗಳಿಗೂ ಭೀಕರ ಯುದ್ಧವಾಯಿತು. ಯುದ್ಧದಲ್ಲಿ ಅಸುರರೇ ಮೇಲುಗೈ ಪಡೆದು ಗೆಲ್ಲುವ ಸ್ಥಿತಿ ಉಂಟಾಯಿತು. ಇದರಿಂದ ಚಿಂತಾಕ್ರಾಂತನಾದ ಇಂದ್ರ ತನ್ನ ಆಸ್ಥಾನಕ್ಕೆ ಗುರು ಬೃಹಸ್ಪತಿಯನ್ನು ಕರೆಸಿ ಸಲಹೆಯನ್ನು ಕೇಳುತ್ತಾನೆ. ವೇಳೆ ಇಂದ್ರನ ಮಡದಿ ಇಂದ್ರಾಣಿ ಕೂಡ ಅಲ್ಲೇ ಇರುತ್ತಾಳೆ. ಬೃಹಸ್ಪತಿ ಮಾತನಾಡುವುದಕ್ಕೂ ಮೊದಲೇ ಇಂದ್ರಾಣಿ ಎದ್ದುನಿಂತು, ದೇವತೆಗಳನ್ನು ಗೆಲ್ಲಿಸುವ ತಂತ್ರ ನನಗೆ ಗೊತ್ತು. ನಾವೇ ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಭರವಸೆ ನೀಡಿದಳು. ಇದಾದ ಮರುದಿನ ಇಂದ್ರಾಣಿ ಮಂತ್ರ ಪುರಸ್ಸರವಾಗಿ ತಯಾರಿಸಿದ ಒಂದು ರಕ್ಷೆಯನ್ನು ತನ್ನ ಪತಿಯ ಕೈಗೆ ಕಟ್ಟಿದಳು. ರಕ್ಷೆಯನ್ನು ಕಟ್ಟಿಸಿಕೊಂಡು ಇಂದ್ರ ಯುದ್ಧರಂಗಕ್ಕೆ ಕಾಲಿಟ್ಟಿದ್ದೇ ತಡ ಅಸುರರು ಚದುರಿ ಪರಾರಿಯಾದರು. ದೇವತೆಗಳ ಮುಂದೆ ಅಸುರರು ತಲೆ ಬಾಗಿದರು. ಇದರಿಂದ ದೇವತೆಗಳು ಯುದ್ಧವನ್ನು ಗೆದ್ದರು. ಇದೇ ರೀತಿ ಇನ್ನೂ ಅನೇಕ ದಂತಕಥೆಗಳಿವೆ.
ಆಚರಣೆ ಹೇಗೆ?
ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು, ನೆತ್ತಿಯ ಮೇಲೆ ಅಕ್ಕಿ ಅಥವಾ ಅಕ್ಷತೆಯನ್ನು ಹಾಕಬೇಕು. ಬಳಿಕ ಅಣ್ಣನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ತಂಗಿ ರಾಖಿ ಕಟ್ಟಿದ ನಂತರ ಅಣ್ಣ ಪ್ರೀತಿಯ ಸಹೋದರಿಗೆ ಉಡುಗೊರೆ ಕೊಡುತ್ತಾನೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸಹೋದರನಿಗೆ ತನ್ನ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತದೆ. ಜೊತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಬಲಪಡಿಸುತ್ತದೆ.