ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್

Public TV
4 Min Read
images 3

ಬೆಂಗಳೂರು: ಒಂದೇ ಒಂದು ರಾಜ್ಯಸಭೆ ಸೀಟ್ ಬೇರೆ ಬೇರೆ ರೀತಿಯ ಟ್ವಿಸ್ಟ್‌ಗೆ ಸಾಕ್ಷಿಯಾಗುತ್ತಿದೆ. ಜೆಡಿಎಸ್ ಬಹಿರಂಗ ಬೆಂಬಲದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ರಾಜಕೀಯ ಚದುರಂಗದಾಟ ಆರಂಭಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಶಾಸಕರಿಗೆ ಎರಡು ಪುಟಗಳ ಪತ್ರದ ಮೂಲಕ ‘ಆತ್ಮಸಾಕ್ಷಿ’ ಮತ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

BJP JDS CON

ಕೊನೆಯ ಹಂತದಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಗೆಲುವಿಗಾಗಿ ಕಾಂಗ್ರೆಸ್ ಜೆಡಿಎಸ್ ಜೊತೆ ಬಹಿರಂಗವಾಗಿ ಪತ್ರದ ಮೂಲಕ ಬೆಂಬಲ ಕೇಳಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್‍ಗೆ ಆತ್ಮಸಾಕ್ಷಿ ಮತ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ. ರಾಜ್ಯಸಭೆ ಚುನಾವಣೆ ಜಾತ್ಯತೀತ ಸಾವು ಬದುಕಿನ ಪ್ರಶ್ನೆ. ಕೋಮುವಾದಿ ಬಿಜೆಪಿ ಒಂದ್ಕಡೆ, ಕಾಂಗ್ರೆಸ್, ಜೆಡಿಎಸ್ ಇನ್ನೊಂದೆಡೆ ನಿಂತಿದೆ. ಹಾಗಾಗಿ ಜಾತಿವಾದಿ, ಕೋಮುವಾದಿಗಳಿಗೆ ತಕ್ಕ ಉತ್ತರ ನೀಡಬೇಕೆಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿ ಜೆಡಿಎಸ್ ಜೊತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಂಖ್ಯೆ 19 ರಲ್ಲಿದೆ ಲೆಹರ್ ಸಿಂಗ್ ಗೆಲುವಿನ ಸೀಕ್ರೆಟ್

ಪತ್ರದಲ್ಲಿ ಏನಿದೆ?
ಜಾತ್ಯತೀತ ಜನತಾದಳದ ವಿಧಾನಸಭಾ ಸದಸ್ಯರಿಗೆ ಪ್ರೀತಿಯ ನಮಸ್ಕಾರಗಳು. ದೇಶ ಅತ್ಯಂತ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವುದು ನಮ್ಮೆಲ್ಲರ ಅರಿವಿನಲ್ಲಿದೆ. ಸಾಮಾಜಿಕ ನ್ಯಾಯ, ಸಮಾನತೆ, ಭಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಪ್ರಭುತ್ವವೇ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಚಾಲನಾ ಶಕ್ತಿ ಎನ್ನುವುದು ನಾವು ಇತಿಹಾಸದಿಂದ ಕಲಿತ ಪಾಠವಾಗಿದೆ. ಕಲಿತ ಪಾಠವನ್ನು ಪ್ರಯೋಗಿಸುವ ಅವಕಾಶ ಎದುರಾದಾಗ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ.

jds logo

ಇಂತಹದ್ದೊಂದು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶವನ್ನು ಇದೇ ಜೂನ್ ಹತ್ತರಂದು ರಾಜ್ಯದಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ನಮಗೆ ನೀಡಿದೆ. ಕಾಂಗ್ರೆಸ್ ಕೋಮುವಾದದ ಜೊತೆ ಎಂದೂ ರಾಜಿಯಾಗದೇ ಜಾತ್ಯತೀತತೆ ಪರವಾಗಿ ಗಟ್ಟಿಯಾಗಿ ನಿಂತಿರುವ ಪಕ್ಷ. ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಪ್ರಸಂಗ ಎದುರಾದಾಗ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಲೆಕ್ಕಿಸದೆ ಜಾತ್ಯತೀತತೆ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಜನತಾದಳದ ಹಿರಿಯ ನಾಯಕ ಹೆಚ್.ಡಿ.ದೇವೇಗೌಡರಿಗೆ ಪ್ರಧಾನಿಯಾಗುವ ಅವಕಾಶ ಎದುರಾದಾಗ ಕಾಂಗ್ರೆಸ್ ಪಕ್ಷ ಮುಕ್ತ ಹೃದಯದಿಂದ ಬೆಂಬಲಿಸಿತ್ತು. ಎರಡು ವರ್ಷಗಳ ಹಿಂದೆ ಹೆಚ್.ಡಿ.ದೇವೇಗೌಡರು ರಾಜ್ಯಸಭಾ ಚುನಾವಣೆಯನ್ನು ಎದುರಿಸಿದಾಗ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಗೌಡರನ್ನು ಬೆಂಬಲಿಸಿ ಗೆಲ್ಲಿಸಿತ್ತು. ನಾಲ್ಕು ವರ್ಷಗಳ ಹಿಂದೆ ಕೇವಲ 37 ಶಾಸಕರನ್ನು ಹೊಂದಿದ್ದ ಜಾತ್ಯತೀತ ಜನತಾದಳಕ್ಕೆ ನಮ್ಮ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಹೆಚ್.ಡಿ.ಕುಮರಾಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿತ್ತು. ಇದು ನಮ್ಮ ಸೈದ್ದಾಂತಿಕ ಬದ್ದತೆ. ಈ ಬಾರಿ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇದೇ ಸೈದ್ದಾಂತಿಕ ಬದ್ದತೆಯಿಂದ ಜನತಾದಳ ನಮ್ಮ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬಹುದು ಎಂಬ ನಿರೀಕ್ಷೆಯಿಂದ ನಮ್ಮ ಯುವನಾಯಕ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದ್ದೆವು. ನಮ್ಮ ಅಭ್ಯರ್ಥಿ ಘೋಷಣೆ ಮಾಡಿದ ಮರುದಿನ ತಮ್ಮಲ್ಲಿ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸುವಷ್ಟು ಮತಗಳು ಲಭ್ಯವಿಲ್ಲದೆ ಇದ್ದರೂ ಜೆಡಿಎಸ್ ಪಕ್ಷ, ಹಠಾತ್ತನೆ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ನಮಗೆ ಆಘಾತವುಂಟುಮಾಡಿದೆ. ಇದನ್ನೂ ಓದಿ: ಡಿಕೆಶಿ ಬಳಿಕ ಸಿದ್ದರಾಮಯ್ಯ ಇಮೇಜ್ ಬಿಲ್ಡ್‌ಗೆ ಮೊರೆ

ಈ ಚುನಾವಣೆ ಬಹುಮುಖ್ಯವಾಗಿ ಜಾತ್ಯಾತೀತತೆ ಮತ್ತು ಕೋಮುವಾದ ಎಂಬ ಎರಡು ಸಿದ್ದಾಂತಗಳ ನಡುವಿನ ಸಮರವೂ ಆಗಿದೆ ಎನ್ನುವುದನ್ನು ನೀವು ಬಲ್ಲಿರಿ. ರಾಷ್ಟ್ರಕವಿ ಕುವೆಂಪು ಅವರು ಹೆಮ್ಮೆಯಿಂದ ಹೇಳಿಕೊಂಡ ಸರ್ವಜನಾಂಗದ ಶಾಂತಿಯ ತೋಟವನ್ನು ಬಿಜೆಪಿ, ಧಾರ್ಮಿಕ ದ್ವೇಷಾಸೂಯೆಗಳಿಂದ ಹಾಳುಗೆಡಹುತ್ತಿರುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು, ನಾಡಪ್ರಭು ಕೆಂಪೇಗೌಡ, ಕುವೆಂಪು ಸೇರಿದಂತೆ ನಾವು ಗೌರವಿಸುವ ಮಹಾಪುರುಷರಿಗೆ ಮಾಡಿರುವ ಅವಮಾನ ಇದಕ್ಕೆ ಇತ್ತೀಚಿನ ಜ್ವಲಂತ ಉದಾಹರಣೆ.

ಕನ್ನಡಿಗರೆಲ್ಲರ ಆತ್ಮಸ್ವರೂಪಿಯಾದ ಕುವೆಂಪು ವಿರಚಿತ ನಾಡಗೀತೆಯನ್ನೇ ತಿರುಚಿದ ಕಿಡಿಗೇಡಿಯಿಂದಲೇ ಈ ಎಲ್ಲ ದುಷ್ಕೃತ್ಯಗಳನ್ನು ಮಾಡಿಸುವ ಧಾಷ್ಟ್ರ್ಯವನ್ನು ಬಿಜೆಪಿ ತೋರಿದೆ. ರಾಜ್ಯಸಭಾ ಚುನಾವಣೆಯ ಮೂಲಕ ಒದಗಿ ಬಂದ ಅವಕಾಶವನ್ನು ಬಳಸಿಕೊಂಡು ಕೋಮುವಾದಿ ಮತ್ತು ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕೆಂದು ಜಾತ್ಯತೀತತೆ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮೇಲೆ ನಂಬಿಕೆ ಇಟ್ಟಿರುವ ನಾಡಬಾಂಧವರೆಲ್ಲರ ಮನದಾಳದ ಹಾರೈಕೆಯಾಗಿದೆ. ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆಯಾಗಿ ರಾಜ್ಯಸಭಾ ಚುನಾವಣೆ ನಮ್ಮ ಮುಂದಿದೆ. ಸೈದ್ದಾಂತಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಕಡೆ ಇದ್ದರೆ, ಕೋಮುವಾದವನ್ನೇ ಉಸಿರಾಡುವ ಬಿಜೆಪಿ ಇನ್ನೊಂದು ಕಡೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಎರಡನೇ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿ ಖಾನ್ ಅವರ ಸೋಲು-ಗೆಲುವನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲ ಜಾತ್ಯತೀತತೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಸೈದ್ದಾಂತಿಕ ಬದ್ದತೆಯಿಂದ ಜಾತ್ಯಾತೀತ ಜನತಾದಳ ಬೆಂಬಲಿಸಿದರೆ ಈ ಯುವನಾಯಕನ ಆಯ್ಕೆ ನಿರಾತಂಕವಾಗಿ ನಡೆದುಹೋಗುತ್ತದೆ. ಮನ್ಸೂರು ಅಲಿ ಖಾನ್ ಅವರ ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗದೆ ಜಾತ್ಯತೀತ ಸಿದ್ದಾಂತದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡರ ಸೈದ್ದಾಂತಿಕ ಗೆಲುವಾಗುತ್ತದೆ. ಪ್ರಜಾಪ್ರತಿನಿಧಿಗಳಾದ ನಾವೆಲ್ಲರೂ ನಮ್ಮ ಪ್ರಭುಗಳಾದ ಪ್ರಜೆಗಳ ಆತ್ಮಸಾಕ್ಷಿಗೆ ದನಿಯಾಗಬೇಕಾಗಿರುವುದು ಕರ್ತವ್ಯವಾಗಿದೆ. ಈ ಆತ್ಮಸಾಕ್ಷಿಯ ಮತವನ್ನು ಜಾತ್ಯತೀತತೆಗೆ ಬದ್ದವಾಗಿರುವ ನಮ್ಮ ಪಕ್ಷದ ಮನ್ಸೂರ್ ಅಲಿ ಖಾನ್ ಅವರಿಗೆ ಚಲಾಯಿಸಬೇಕೆಂದು ನನ್ನ ಸವಿನಯ ವಿನಂತಿ.

Share This Article
Leave a Comment

Leave a Reply

Your email address will not be published. Required fields are marked *