ಗಣರಾಜ್ಯೋತ್ಸವ- ದೆಹಲಿಯಲ್ಲಿ ಹೈ ಅಲರ್ಟ್

Public TV
2 Min Read
Delhi Republic Day

ನವದೆಹಲಿ : 71ನೇ ಗಣರಾಜೋತ್ಸವ ಆಚರಣೆ ಹಿನ್ನೆಲೆ ದೆಹಲಿಯಲ್ಲಿ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಕೇಂದ್ರ ಬಿಂದು ರಾಜಪಥ್ ರಸ್ತೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಈ ವರ್ಷದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾಗವಹಿಸಲಿದ್ದು, ರಾಷ್ಟ್ರಪತಿ ರಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

ರಾಷ್ಟ್ರಪತಿ ಭವನದ ಮುಂಭಾಗದಿಂದ ರಾಜಪಥ್ ನಿಂದ ಇಂಡಿಯಾ ಗೇಟ್ ವರೆಗೂ 8 ಕಿಮೀ ವರೆಗೂ ಪರೇಡ್ ನಡೆಯಲಿದ್ದು, ಈ ಪ್ರದೇಶದ ಐದು ಕಿಮೀ ಸುತ್ತಲೂ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಎತ್ತರದ ಕಟ್ಟಡಗಳಲ್ಲಿ ಶಾರ್ಪ್ ಶೂಟರ್‍ಗಳನ್ನು ನೇಮಕ ಮಾಡಿದ್ದು, ಡ್ರೋನ್ ಕ್ಯಾಮರಗಳನ್ನು ಅಳವಡಿಸಲಾಗಿದೆ.

Delhi Republic Day 1

ದೆಹಲಿಯಲ್ಲಿ ಒಟ್ಟು 22 ಸಾವಿರ ದೆಹಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು ರಾಜಪಥ್ ರಸ್ತೆ ಸುತ್ತಲೂ 10 ಸಾವಿರ ಪೊಲೀಸ್ ಭದ್ರತೆಗಿರಲಿದ್ದಾರೆ. ಇದರಲ್ಲೇ 48 ಸಿಆರ್‍ಪಿಎಫ್ ಕಂಪನಿಗಳನ್ನು ಹೆಚ್ಚುವರಿ ಭದ್ರತೆಗೆ ನೇಮಿಸಿದೆ. ವೇದಿಕೆ ಸುತ್ತ ಎನ್‍ಎಸ್‍ಜಿ, ಎಸ್‍ಪಿಜಿ, ಐಟಿಬಿಪಿ ಭದ್ರತಾ ಪಡೆಗಳನ್ನು ಹಲವು ಸುತ್ತಿನಲ್ಲಿ ನಿಯೋಜಿಸಿದೆ. ಸುಲಭ ಸಂಚಾರಕ್ಕೆ 2 ಸಾವಿರ ಟ್ರಾಫಿಕ್ ಪೊಲೀಸರನ್ನು ನೇಮಕ ಮಾಡಿದ್ದು ಒಟ್ಟು 150 ಉನ್ನತ ತಂತ್ರಜ್ಞಾನದ ಸಿಸಿಟಿವಿಗಳನ್ನು ಅಳವಡಿಸಿದೆ.

ಕೇವಲ ರಾಜಪಥ್ ಮಾತ್ರವಲ್ಲದೆ ದೆಹಲಿಯ ಎಲ್ಲ ಮೆಟ್ರೋ ರೈಲು, ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ವಹಿಸಲಾಗಿದ್ದು ಸಿಎಎ ಎನ್ ಆರ್‍ಸಿ ವಿರೋಧಿಸಿ ಪ್ರತಿಭಟನೆಗಳಾಗದಂತೆ ಎಚ್ಚರಿಕೆ ವಹಿಸಿದೆ. ನಾಳೆ ಬೆಳಗ್ಗೆ ಹತ್ತು ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮೂಲಕ ಕಾರ್ಯಕ್ರಮ ಆರಂಭವಾಗಲಿದ್ದು, 90 ನಿಮಿಷಗಳ ಕಾಲ ಪರೇಡ್ ನಡೆಯಲಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸೇನಾ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಲಿದ್ದಾರೆ.

Delhi Republic Day 2

ಬಸವಣ್ಣನವರ ಅನುಭವ ಮಂಟಪದ ಸ್ತಬ್ಧ ಚಿತ್ರ ಈ ಬಾರಿ ರಾಜ್ಯವನ್ನು ಪ್ರತಿನಿಧಿಸಲಿದ್ದು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದ ಬಸವಣ್ಣ ನವರ ಪರಿಕಲ್ಪನೆ ರಾಜಪಥ್ ರಸ್ತೆಯಲ್ಲಿ ಅನಾವರಣಗೊಳ್ಳಲಿದೆ. ಅಖಿಲ ಭಾರತ ಹಿರಿಯ ಬಾಲಕಿಯರ ಎನ್‍ಸಿಸಿ ಪರೇಡ್ ನೇತೃತ್ವವನ್ನು ದಾವಣಗೆರೆಯ ಎಂ.ಪಿ ಶ್ರೀಷ್ಮಾ ಹೆಗ್ಡೆ ವಹಿಸಿಕೊಂಡಿರುವುದು ಮತ್ತೊಂದು ಆಕರ್ಷಣೆ. ಎನ್‍ಸಿಸಿ ಬಾಲಕ ವಿಭಾಗದ ಪರೇಡ್ ನಲ್ಲಿ ದಾವಣಗೆರೆಯ ಮಹಮ್ಮದ್ ಮುಸವಿರ್ ಭಾಗಿಯಾಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *