ಹೆಸರಾಂತ ನಟ ರಜನಿಕಾಂತ್ (Rajinikanth) ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ರೆಡಿಯಾಗುತ್ತಿದ್ದಂತೆಯೇ , ಈ ಸಿನಿಮಾದಲ್ಲಿ ರಜನಿ ಪಾತ್ರ ಮಾಡೋರು ಯಾರು ಎನ್ನುವ ಚರ್ಚೆ ಶುರುವಾಗಿದೆ. ರಜನಿಕಾಂತ್ ಅವರ ಬಯೋಪಿಕ್ ಬಂದರೆ, ಅವರ ಪಾತ್ರವನ್ನು ನಾನು ಮಾಡುತ್ತೇನೆ ಎಂದು ಧನುಷ್ (Dhanush) ಹೇಳಿದ್ದರು. ಸದ್ಯದ ಪರಿಸ್ಥಿತಿಯಂತೆ ಅವರಿಗೆ ಆ ಪಾತ್ರ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ತಮಿಳು ಸಿನಿಮಾ ರಂಗದಲ್ಲಿ ಓಡಾಡುತ್ತಿರುವ ಹೆಸರಿನ ಪ್ರಕಾರ ರಜನಿ ಅವರ ಪಾತ್ರವನ್ನು ಶಿವಕಾರ್ತಿಕೇಯನ್ (Shivakarthikeyan) ನಿರ್ವಹಿಸಲಿದ್ದಾರಂತೆ. ಹಾಗಾಗಿ ಧನುಷ್ ಅವರಿಗೆ ಈ ಪಾತ್ರ ಸಿಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಈ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದೆ ಬಂದಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ತಯಾರಿಸಿರುವ ಸಾಜಿದ್ ನಾಡಿಯಾದ್ವಾಲ್ (Sajid Nadiadwal) ಅವರು ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ.
ಹಲವಾರು ವರ್ಷಗಳಿಂದ ರಜನಿ ಬಯೋಪಿಕ್ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಆದರೆ, ಯಾವುದೂ ನಿಕ್ಕಿ ಆಗಿರಲಿಲ್ಲ. ಈ ಬಾರಿ ನಿರ್ಮಾಪಕರ ಹೆಸರೂ ಬಹಿರಂಗ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರ ಬರಬಹುದು. ಅದು ಹಲವು ಭಾಷೆಗಳಲ್ಲೂ ನಿರ್ಮಾಣ ಆಗಬಹುದು.
ಸದ್ಯಕ್ಕೆ ನಿರ್ಮಾಣ ಸಂಸ್ಥೆಯ ಹೆಸರು ಮಾತ್ರ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು, ತಾಂತ್ರಿಕ ವರ್ಗ ಹಾಗೂ ರಜನಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಹೊರಬಹುದು.