ಲಕ್ನೋ: 22 ವರ್ಷಕ್ಕೆ ಐದು ಮಕ್ಕಳ ತಾಯಿಯಾಗಿರುವ ಮಹಿಳೆಯೊಬ್ಬಳು ಮತ್ತೆ (Pregnant) ಗರ್ಭಿಣಿಯಾಗಿದ್ದಾರೆ. ಇನ್ನೊಂದು ಗಂಡು ಮಗು ಬೇಕು ಎಂಬ ಈಕೆಯ ಕಾರಣ ಕೇಳಿ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಈ ಮಹಿಳೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋವನ್ನು ಉತ್ತರ ಪ್ರದೇಶದ (Uttar Pradesh) ಬಾಗ್‌ಪತ್ ಜಿಲ್ಲೆಯ ಸ್ಪಂದನ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಜ್ಞಾ ತೋಮರ್ ಹಂಚಿಕೊಂಡಿದ್ದಾರೆ. ಮಹಿಳೆಯ ಆರೋಗ್ಯದ ಮೇಲೆ ನಿರಂತರ ಗರ್ಭಧಾರಣೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಮಹಿಳೆ ತನಗೆ 22 ವರ್ಷ ಎಂದು ಹೇಳಿದ್ದಾರೆ. ಈಗಾಗಲೇ 5 ಮಕ್ಕಳು ಇದ್ದು, ಆರನೇ ಮಗುವಿಗೆ ಐದು ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಮಹಿಳೆಗೆ ನಾಲ್ಕು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು ಇದೆ.
ಮಾತುಕತೆ ವೇಳೆ ದಂಪತಿ ತಾವು ರಾಜಸ್ಥಾನ ಮೂಲದವರು ಎಂದು ತಿಳಿಸಿದ್ದಾರೆ. ಮಹಿಳೆ 15ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾಗಿ ಹೇಳಿದ್ದಾರೆ. ದಂಪತಿಯ ಮೊದಲ ಮಗುವಿಗೆ ಈಗ 8 ವರ್ಷ ವಯಸ್ಸು ಎಂದು ತಿಳಿದುಬಂದಿದೆ.
ವೈದ್ಯರು ಗರ್ಭಧಾರಣೆಗಳ ನಡುವೆ ಅಂತರವಿಲ್ಲ ಏಕೆ ಎಂದು ಪ್ರಶ್ನಿಸಿದಾಗ, ಮಹಿಳೆ ನಿರಂತರವಾಗಿ ಹೆಣ್ಣು ಮಕ್ಕಳು ಹುಟ್ಟಿದ್ದರಿಂದ ಮತ್ತೆ ಮತ್ತೆ ಗರ್ಭಿಣಿಯಾಗಬೇಕಾಯಿತು ಎಂದು ಹೇಳಿದ್ದಾರೆ. ಬಳಿಕ ಗಂಡು ಮಗುವಿಗಾಗಿ ಈ ನಿರ್ಧಾರವೇ ಎಂದು ಕೇಳಿದಾಗ ಮಹಿಳೆ ಒಪ್ಪಿಕೊಂಡಿದ್ದಾರೆ.
ಒಬ್ಬ ಗಂಡು ಮಗನಿದ್ದಾನಲ್ಲ ಎಂದು ವೈದ್ಯರು ಕೇಳಿದ ಪ್ರಶ್ನೆಗೆ, ಒಬ್ಬ ಮಗ ಸಾಕಾಗಲ್ಲ, ಕನಿಷ್ಠ ಇಬ್ಬರು ಗಂಡು ಮಕ್ಕಳು ಬೇಕು. ಹೆಚ್ಚು ಮಕ್ಕಳು ಇದ್ದರೆ ಮುಂದೆ ದುಡಿಯುವ ಕೈಗಳು ಹೆಚ್ಚಾಗುತ್ತವೆ ಎಂದು ಮಹಿಳೆಯ ಪತಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯೆ, ಮಹಿಳೆಗೆ ತಲೆ ಸುತ್ತು ಮತ್ತು ಉಸಿರಾಟದ ತೊಂದರೆ ಇದೆ. ಗರ್ಭಧಾರಣೆಗಳ ನಡುವೆ ಅಂತರ ಇರಬೇಕಿತ್ತು. ಮಗುವಿಗಾಗಿ ಮಹಿಳೆಯ ಆರೋಗ್ಯ ಹಾಳು ಮಾಡಬಾರದು ಎಂದು ಎಚ್ಚರಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಹಲವರು ಪತಿಯ ಮಾತುಗಳನ್ನು ಟೀಕಿಸಿದ್ದಾರೆ. ಕುಟುಂಬಕ್ಕೆ ಸರಿಯಾಗಿ ಊಟ, ಬಟ್ಟೆ, ಆಶ್ರಯ ಕೊಡಲು ಆಗದವರು ಯಾಕೆ ಇಷ್ಟು ಮಕ್ಕಳು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
