ಜೈಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ, 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಮರಣ ದಂಡನೆ ಶಿಕ್ಷೆ ನೀಡುವ ತಿದ್ದುಪಡಿ ಮಸೂದೆಯನ್ನು ರಾಜಸ್ಥಾನ ವಿಧಾನಸಭೆ ಶುಕ್ರವಾರದಂದು ಅಂಗೀಕರಿಸಿದೆ.
ಈ ಮಸೂದೆ ಅಂಗೀಕರಿಸುವಲ್ಲಿ ಮಧ್ಯಪ್ರದೇಶದ ನಂತರ ರಾಜಸ್ಥಾನ ಎರಡನೇ ರಾಜ್ಯವಾಗಿದೆ. ಮಂಗಳವಾರದಂದು ರಾಜಸ್ಥಾನ ಸರ್ಕಾರ ದಿ ಕ್ರಿಮಿನಲ್ ಲಾಸ್ ರಾಜಸ್ಥಾನ ಅಮೆಂಡ್‍ಮೆಂಟ್ ಬಿಲ್ 2018 ನ್ನು ಮಂಡನೆ ಮಾಡಿದ್ದು, ಭಾರತೀಯ ದಂಡ ಸಂಹಿತೆ(ಐಪಿಸಿ) ಗೆ ಸೆಕ್ಷನ್ 376-ಎಎ ಸೇರಿಸಲು ಕೋರಲಾಗಿದೆ. ಇದರ ಪ್ರಕಾರ 12 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುವ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ಅಥವಾ 14 ವರ್ಷಗಳಿಗಿಂತ ಹೆಚ್ಚಿನ ಕಠಿಣ ಕಾರಾಗೃಹ ಶಿಕ್ಷೆ ನೀಡಬೇಕು. ಇದನ್ನ ಜೀವಾವಧಿ ಶಿಕ್ಷೆಯಾಗಿಯೂ ವಿಸ್ತರಿಸಬಹುದಾಗಿದ್ದು, ವ್ಯಕ್ತಿ ತನ್ನ ಇಡೀ ಜೀವಿತಾವಧಿಯನ್ನ ಜೈಲಿನಲ್ಲಿ ಕಳೆಯಬೇಕು. ಜೊತೆಗೆ ದಂಡವನ್ನೂ ವಿಧಿಸಬಹುದು ಎಂದು ಹೇಳಿದೆ. ಗ್ಯಾಂಗ್‍ರೇಪ್‍ಗೆ ಸಂಬಂಧಿಸಿದಂತೆ ಇದೇ ರೀತಿಯ ಅವಕಾಶ ಕೋರಿ ಸೆಕ್ಷನ್ 376-ಡಿಡಿ ಸೇರಿಸಲಾಗಿದೆ.
Advertisement
Advertisement
ಮಸೂದೆ ಮಂಡನೆ ಹಿಂದಿನ ಕಾರಣದ ಬಗ್ಗೆ ತಿಳಿಸಿರುವ ರಾಜಸ್ಥಾನ ಸರ್ಕಾರ, ಆಗಾಗ ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಗ್ಯಾಂಗ್ ರೇಪ್ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳು ಅತ್ಯಂತ ಘೋರವಾಗಿದ್ದು, ಸಂತ್ರಸ್ತರ ಬಾಳನ್ನೇ ನರಕ ಮಾಡಿಬಿಡುತ್ತವೆ. ಮುಂದಿನ ಜನಾಂಗದ ಮಕ್ಕಳನ್ನ ಈ ರೀತಿಯ ಕೃತ್ಯಗಳಿಂದ ರಕ್ಷಿಸುವುದು ಹಾಗೂ ಅವರ ಮಾನಸಿಕ, ದೈಹಿಕ ಬೆಳವಣಿಗೆಗೆ ಅನುಕೂಲಕರ ವಾತಾವರಣ ನೀಡುವುದು ಸಮಾಜ ಹಾಗೂ ರಾಜ್ಯದ ಆದ್ಯ ಕರ್ತವ್ಯ. ಹೀಗಾಗಿ ಇಂತಹ ಕೃತ್ಯಗಳಲ್ಲಿ ಕಠಿಣವಾದ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ 12 ವರ್ಷ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗುವವರಿಗೆ ಕಠಿಣ ಶಿಕ್ಷೆ ನೀಡಬೇಕು. ಅದನ್ನ ಮರಣದಂಡನೆಗೂ ವಿಸ್ತರಿಸಬಹುದು ಎಂದು ಹೇಳಿದೆ.
Advertisement
ಫೆಬ್ರವರಿಯಲ್ಲಿ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ವಸುಂಧರಾ ರಾಜೆ, 12 ವರ್ಷ ಕೆಳಗಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುವವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದ್ದರು.
Advertisement
ಕಳೆದ ವರ್ಷ ಡಿಸೆಂಬರ್ ನಲ್ಲಿ ಮಧ್ಯಪ್ರದೇಶ ಸರ್ಕಾರ ಇಂತಹದ್ದೇ ಮಸೂದೆಯನ್ನ ಅಂಗೀಕರಿಸಿತ್ತು. ಕಳೆದ ತಿಂಗಳು ಹರಿಯಾಣ ಸಂಪುಟವೂ ಕೂಡ ಐಪಿಸಿಗೆ ಇದೇ ರೀತಿಯ ತಿದ್ದುಪಡಿ ತರಲು ಸಮ್ಮತಿ ಸೂಚಿಸಿದೆ.