ಜೈಪುರ್: ಹನುಮಂತನನ್ನು ದಲಿತ ಎಂದು ಕರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಜಸ್ಥಾನದ ಬಲಪಂಥೀಯ ಗುಂಪೊಂದು ಲೀಗಲ್ ನೋಟಿಸ್ ನೀಡಿದೆ.
ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಯೋಗಿ ಅವರ ಹೇಳಿಕೆಯಿಂದಾಗಿ ಹನುಮಂತನ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ರಾಜಕೀಯ ಲಾಭಕ್ಕಾಗಿ ದೇವರ ಹೆಸರನ್ನು ಬಳಸಿಕೊಳ್ಳುವುದು ಸರಿಯಲ್ಲ. ಹೀಗಾಗಿ ಮೂರು ದಿನಗಳ ಒಳಗಾಗಿ ಯೋಗಿ ಆದಿತ್ಯನಾಥ್ ಕ್ಷಮೆ ಕೇಳಬೇಕು ಎಂದು ನೋಟಿಸ್ ನಲ್ಲಿ ಒತ್ತಾಯಿಸಿದ್ದಾರೆ.
ಸಿಎಂ ಆದಿತ್ಯನಾಥ್ ಹೇಳಿದ್ದೇನು?:
ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಅಲ್ವಾರ್ ಜಿಲ್ಲೆಯ ಮಾಳಖೇಡದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದರು. ಈ ವೇಳೆ ನಡೆದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹನುಮಂತ ಒಬ್ಬ ಅರಣ್ಯ ನಿವಾಸಿ. ರಾಮನ ಆಶಯದಂತೆ ಎಲ್ಲರನ್ನು ಒಂದುಗೂಡಿಸುವುದು ಹನುಮಂತನ ನಿರ್ಧಾರವಾಗಿತ್ತು. ಹೀಗಾಗಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಭಾರತೀಯ ಸಮುದಾಯಗಳನ್ನು ಸಂಪರ್ಕಿಸುವ ಕೆಲಸ ಮಾಡಿದ ಒಬ್ಬ ದಲಿತ ಎಂದಿದ್ದರು.
ಈ ಹೇಳಿಗೆ ವಿರುದ್ಧ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಕಿಡಿಕಾರಿದ್ದಾರೆ. ಬಿಜೆಪಿಯವರು ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಾತಿಯ ಆಧಾರ ಮೇಲೆ ದೇವರನ್ನು ಪ್ರತ್ಯೇಕಿಸಿ ಪ್ರಚಾರ ಮಾಡಿದ್ದಾರೆ ಎಂದು ದೂರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv