– ವಿಪಕ್ಷಗಳಿಗೆ ಆಹಾರವಾಯ್ತು ಸಿಎಂ ಭಜನ್ ಲಾಲ್ ಶರ್ಮಾ ಹೇಳಿಕೆ
ಜೈಪುರ: ಪ್ರಧಾನಿ ನರೇಂದ್ರ ಮೋದಿ ನನ್ನ ನೆಚ್ಚಿನ ನಟ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೀಡಿದ ಹೇಳಿಕೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿರೋಧ ಪಕ್ಷಗಳು ಪ್ರಧಾನಿ ಮತ್ತು ಬಿಜೆಪಿಯನ್ನು ಅಪಹಾಸ್ಯ ಮಾಡಲು ಮುಂದಾಗಿದ್ದಾರೆ.
ಜೈಪುರದಲ್ಲಿ ನಡೆದ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಶರ್ಮಾ ಅವರು ಈ ಹೇಳಿಕೆ ನೀಡಿದ್ದಾರೆ.
- Advertisement
- Advertisement
ಶರ್ಮಾ ಅವರನ್ನು ಸಂವಾದದ ಸಮಯದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಲಾಯಿತು. ನಗುತ್ತಾ ಅವರು ‘ನರೇಂದ್ರ ಮೋದಿ ಜಿ’ ಎಂದು ಉತ್ತರಿಸಿದ್ದಾರೆ. ಈ ಪ್ರತಿಕ್ರಿಯೆಯು ವಿರೋಧ ಪಕ್ಷದ ನಾಯಕರಿಗೆ ಆಹಾರವಾಗಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಾಸ್ರಾ, ಮೋದಿ ಜಿ ನಾಯಕನಲ್ಲ. ಆದರೆ ನಟ ಎಂದು ನಾವು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇವೆ. ಈಗ, ಬಿಜೆಪಿ ಮುಖ್ಯಮಂತ್ರಿಗಳು ಸಹ ತಡವಾಗಿಯಾದರೂ, ಮೋದಿ ಸಾರ್ವಜನಿಕ ನಾಯಕರಲ್ಲ ಎಂದು ಹೇಳಿದ್ದಾರೆ. ಕ್ಯಾಮೆರಾ ಕೌಶಲ್ಯ, ಟೆಲಿಪ್ರೊಂಪ್ಟರ್‌ಗಳು, ವೇಷಭೂಷಣಗಳು ಮತ್ತು ಭವ್ಯ ಭಾಷಣಗಳಲ್ಲಿ ಮೋದಿ ನಿಪುಣರು ಎಂಬುದನ್ನು ಒಪ್ಪಿಕೊಂಡಿದ್ದಾರೆಂದು ಟಾಂಗ್ ಕೊಟ್ಟಿದ್ದಾರೆ.
ಭಜನ್ ಲಾಲ್ ಜಿ, ನೀವು ಸರಿಯಾಗಿಯೇ ಹೇಳಿದ್ದೀರಿ. ಪ್ರಧಾನಿ ಮೋದಿ ಒಳ್ಳೆಯ ನಟ. ಆದರೆ, ಇತ್ತೀಚೆಗೆ ಅವರ ಅತಿ ನಟನೆ ಸ್ವಲ್ಪ ಹೆಚ್ಚುತ್ತಿದೆ ಎಂದು ನೀವು ಭಾವಿಸುವುದಿಲ್ಲವೇ? ಎಂದು ಶರ್ಮಾ ಅವರನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ನಾಯಕ ಪವನ್ ಖೇರಾ ಪೋಸ್ಟ್ ಹಾಕಿದ್ದಾರೆ. ಎಎಪಿ ತನ್ನ ಎಕ್ಸ್ ಖಾತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ ಶ್ರೇಷ್ಠ ನಟ. ಭೂತ, ವರ್ತಮಾನ ಅಥವಾ ಭವಿಷ್ಯದಲ್ಲಿ ಅವರನ್ನು ಮೀರಿಸಬಲ್ಲವರು ಯಾರೂ ಇಲ್ಲ ಎಂದು ಬಿಜೆಪಿ ಮುಖ್ಯಮಂತ್ರಿಗಳು ಮತ್ತು ನಾಯಕರು ಸ್ವತಃ ನಂಬುತ್ತಾರೆ ಎಂದು ಕಾಲೆಳೆದಿದೆ.