ಬೆಂಗಳೂರು: ಜಟ್ಕಾ ಕಟ್ ಅಭಿಯಾನ ಯಶಸ್ವಿಯಾಗಿರುವ ಹಿನ್ನೆಲೆ ಇದೀಗ ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಸಜ್ಜಾಗಿದೆ.
ಹಿಂದೂಪರ ಸಂಘಟನೆಗಳು ಯುಗಾದಿ ಹೊಸತೊಡುಕು ವೇಳೆ ಹಲಾಲ್ ಕಟ್ ಮಾಂಸವನ್ನು ಬಿಟ್ಟು, ಹಿಂದೂಗಳು ಜಟ್ಕಾ ಕಟ್ ಮಾಂಸವನ್ನು ಖರೀದಿಸಿ ಸೇವೆಸಬೇಕು ಎಂದು ಅಭಿಯಾನ ನಡೆಸಿದ್ದರು. ಅದರಂತೆ ಬುಧವಾರ ಹಲಾಲ್ ಕಟ್ ಮಾಂಸಕ್ಕಿಂತಲೂ ಜಟ್ಕಾ ಕಟ್ ಮಾಂಸವನ್ನು ಜನ ಹೆಚ್ಚಾಗಿ ಖರೀದಿಸಿದ್ದು, ಜಟ್ಕಾ ಕಟ್ ಅಭಿಯಾನ ಯಶಸ್ವಿಯಾಗಿದೆ.
ಇದರ ಬೆನ್ನಲ್ಲೇ ಇದೀಗ ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಕಾನೂನಾತ್ಮಕವಾಗಿ ಹೋರಾಡಿ ಮಸೀದಿ ಸೌಂಡ್ ಬ್ಯಾನ್ ಮಾಡಲು ಮುಂದಾಗಿದ್ದಾರೆ. ಈ ಕುರಿತಂತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲು ಹಿಂದೂ ಪರ ಸಂಘಟನೆ ತಯಾರಿ ನಡೆಸಿದೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ
ಎಂಎನ್‍ಎಸ್ ಹೋರಾಟ
ಮಸೀದಿಗಳ ಮುಂದೆ ಧ್ವನಿ ವರ್ಧಕಗಳನ್ನು ತೆಗೆಸದಿದ್ದರೆ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದು ಮಹಾರಾಷ್ಟ್ರದ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ಮುಂಬೈನ ಘಾಟ್‍ಕೋಪರ್‍ನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸ್ ನುಡಿಸಲಾಗಿದೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ ಧ್ವನಿವರ್ಧಕಗಳನ್ನು ಬಳಸುವ ಮಸೀದಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಧ್ವನಿವರ್ಧಕಗಳನ್ನು ತೆಗೆದು ಹಾಕಿ. ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದಿದ್ದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?
ನಾನು ಪ್ರಾರ್ಥನೆ ಮಾಡುವುದಕ್ಕೆ ವಿರೋಧಿಸುವುದಿಲ್ಲ. ನೀವು ನಿಮ್ಮ ಮನೆಯಲ್ಲೇ ಪ್ರಾರ್ಥನೆ ಮಾಡಬಹುದು. ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.