ಬೆಂಗಳೂರು: ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ತೇವಾಂಶ ಕೊರತೆ ಹಾಗೂ ಗಾಳಿಯು ದುರ್ಬಲವಾಗಿರುವ ಹಿನ್ನಲೆಯಲ್ಲಿ ಮುಂಗಾರು ಮಳೆ ದುರ್ಬಲವಾಗಿದೆ. ರಾಜ್ಯದ 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ ಇದೆ. ದಕ್ಷಿಣ ಒಳನಾಡಿನ 8 ಜಿಲ್ಲೆಗಳಲ್ಲಿ, ಹಾಗೂ ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕ ಏಳು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂದು ತಿಳಿಸಿದರು.
Advertisement
ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಶೇ.42 ರಷ್ಟು ಮಳೆ ಕೊರತೆ ಇದೆ. ಹಾಗೆ ಕಾವೇರಿ ಭಾಗದಲ್ಲಿ ಶೇಕಡಾ 36ರಷ್ಟು ಮಳೆ ಕೊರತೆ ಇದೆ. ಇನ್ನೂ ನಾಲ್ಕು ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದರು.