ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ 123 ಮಿಲಿ ಮೀಟರ್ ಮಳೆ ಬಿದ್ದಿದೆ.
ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು 125 ಮಿಲಿಮೀಟರ್ ಮಳೆಯಾಗಿದೆ. ಜೂನ್ ಆರಂಭದಲ್ಲಿ ವಾಯು ಚಂಡ ಮಾರುತ ಕರಾವಳಿ ಜಿಲ್ಲೆ ಉಡುಪಿಗೆ ಮಳೆ ಹೊತ್ತು ತಂದಿತ್ತು. ಜುಲೈ 10ರವರೆಗೂ ಮುಂಗಾರು ಮಳೆ ಸಂಪೂರ್ಣ ದುರ್ಬಲವಾಗಿತ್ತು. ಇದೀಗ ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ತೊರೆ ಮತ್ತು ನದಿಗಳು ತುಂಬಿ ಹರಿಯುತ್ತಿದೆ.
Advertisement
Advertisement
ಉಡುಪಿ ಜಿಲ್ಲೆಯಾದ್ಯಂತ ಅನೇಕ ಮಳೆ ಹಾನಿ ಪ್ರಕರಣ ದಾಖಲಾಗಿದೆ. ಕುಂದಾಪುರದಲ್ಲಿ ಗಾಳಿ ಮಳೆ ಬಿದ್ದಿದ್ದರಿಂದ ಮನೆಗಳ ಮೇಲೆ ಮರ ಬಿದ್ದಿದೆ. ಸುಮಾರು 10 ಮನೆಗಳಿಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕುಂದಾಪುರದಲ್ಲಿ ಒಂದು ಅಂಗಡಿಗೆ ತೆಂಗಿನ ಮರ ಬಿದ್ದು 15 ಸಾವಿರ ರೂಪಾಯಿ ನಷ್ಟವಾಗಿದೆ. ಅಷ್ಟೇ ಅಲ್ಲದೇ ಐದು ದನದ ಕೊಟ್ಟಿಗೆಗೆ ಮರ ಬಿದ್ದಿದ್ದು ಸಾವಿರಾರು ರೂಪಾಯಿ ನಷ್ಟವಾಗಿದೆ.
Advertisement
Advertisement
ಉಡುಪಿ ಜಿಲ್ಲೆಯ ಒಟ್ಟು ಏಳು ತಾಲೂಕಿನಲ್ಲೂ ಧಾರಾಕಾರ ಮಳೆಯಾಗಿದ್ದು, ಸುಮಾರು ಮೂರು ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಕಾರ್ಮೋಡ ಮುಸುಕಿದ ವಾತಾವರಣವಿರುವುದರಿಂದ ಮಳೆ ಮುಂದುವರಿಯುವ ಸಾಧ್ಯತೆಯಿದೆ.