ಬೆಂಗಳೂರು: ಈ ಬಾರಿ ಮುಂಗಾರು ಲೇಟಾಗಿ ಎಂಟ್ರಿ ಕೊಟ್ಟಿದ್ದರೂ ಮಳೆಯ ಅಬ್ಬರ ಜೋರಾಗಿಯೇ ಇದೆ. ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೊಡಗಿನಲ್ಲಿ ಈ ಬಾರಿ ಆರಂಭದಲ್ಲಿ ತಣ್ಣಗಿದ್ದ ವರುಣ ಆರೆಂಜ್ ಅಲರ್ಟ್ ಆದ ಬಳಿಕ ಅಂದರೆ ಶುಕ್ರವಾರದಿಂದ ಸುರಿಯಲಾರಂಭಿಸಿದ್ದಾನೆ. ಮುಂದಿನ ಮೂರು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯೂ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಎಲ್ಲೆಲ್ಲೂ ಮಂಜು ಮುಸುಕಿದ್ದು, 48 ಗಂಟೆಗಳಿಂದ ಸೂರ್ಯನ ದರ್ಶನವೇ ಇಲ್ಲವಾಗಿದೆ. ನದಿ, ತೊರೆ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಕಳೆದ ಬಾರಿ ಪ್ರವಾಹಕ್ಕೆ ನಲುಗಿದ್ದ ಕೊಡಗು ಜನರಲ್ಲಿ ಈ ಮಳೆ ಆತಂಕ ಹುಟ್ಟುಹಾಕಿದೆ.
ಕರಾವಳಿ ತೀರ ದಕ್ಷಿಣ ಕನ್ನಡದಲ್ಲೂ ಮಳೆಯಬ್ಬರ ಜೋರಾಗಿದ್ದು, ಜುಲೈ 22ರವರೆಗೆ 200 ಮಿಲಿಮೀಟರ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ರಾಯಚೂರು ಜಿಲ್ಲೆಯಲ್ಲೂ ಮಳೆಯಬ್ಬರ ಜೋರಾಗಿದ್ದು, ದೇವದುರ್ಗದ ವಂದಲಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಭೀಮನಗೌಡ ಸಾವನ್ನಪ್ಪಿದ್ದಾರೆ. ಇತ್ತ ಬೆಂಗಳೂರಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಹೆಬ್ಬಾಳ ಫ್ಲೈ ಓವರ್ ಮೇಲೆ ನೀರು ನಿಂತಿತ್ತು. ಜೊತೆಗೆ ಬಳ್ಳಾರಿ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಂ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.