ಕರ್ನಾಟಕ: ರಾಜ್ಯದ ಹಲವೆಡೆ ತಡರಾತ್ರಿ ವರುಣನ ಆರ್ಭಟಕ್ಕೆ ಮತ್ತೆ ಅವಾಂತರಗಳು ಮುಂದುವರಿದಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಯಲ್ಲಿಯೇ ವಾಹನಗಳು ಮುಳುಗಿ ಹೋಗಿವೆ. ಇಂದು ಬೆಳ್ಳಂಬೆಳಗ್ಗೆಯೇ ಮಳೆ ಶುರುವಾಗಿದ್ದು, ಶಾಲಾ-ಕಾಲೇಜು ಮತ್ತು ಕಚೇರಿಗೆ ತೆರಳಲು ಜನ ಪರದಾಡುತ್ತಿದ್ದಾರೆ.
Advertisement
ಬೆಂಗಳೂರಿನಲ್ಲಿ ತಡರಾತ್ರಿ ಮತ್ತೆ ಮಳೆರಾಯ ಆರ್ಭಟಿಸಿದ್ದಾನೆ. ಯಶವಂತಪುರ, ಯುಬಿಸಿಟಿ, ಶಾಂತಿನಗರ, ಮಲ್ಲೇಶ್ವರಂ, ಎಂಜಿ ರೋಡ್, ವಿಜಯನಗರ ಸೇರಿದಂತೆ ನಗರದ ಎಲ್ಲೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ತಡರಾತ್ರಿ ಸುಮಾರು 1.30ರ ಸುಮಾರಿಗೆ ಬಿರುಸಾಗಿ ಸುರಿಯಲಾರಂಭಿಸಿದ ಮಳೆ ವಾಹನಸವಾರರಿಗೆ ತೊಡಕುಂಟು ಮಾಡಿದೆ. ಶಿವಾನಂದ ಸರ್ಕಲ್, ಡಬಲ್ ರೋಡ್ ಹಾಗೂ ನಗರದ ಹಲವು ರಸ್ತೆಗಳು ನೀರಿನಿಂದ ತುಂಬಿ ಕೆರೆಗಳಂತಾಗಿವೆ. ಅದರಲ್ಲೂ ಶಿವಾನಂದ ವೃತ್ತದ ಸಮೀಪದಲ್ಲಿರುವ ರೈಲ್ವೇ ಅಂಡರ್‍ಪಾಸ್‍ನಲ್ಲಿ ಮಳೆಯ ಪರಿಣಾಮ ಕಾರು, ಲಾರಿ ಸಿಲುಕಿಕೊಂಡಿದೆ. ನೀರಿನ ರಭಸ ಹೆಚ್ಚಿದ್ದ ಕಾರಣ ಉಳಿದ ವಾಹನಗಳ ಸವಾರರು ಚಾಲನೆ ಮಾಡಲು ಹಿಂದೇಟು ಹಾಕಿದ್ದಾರೆ.
Advertisement
Advertisement
ಇನ್ನು ವಿಜಯಪುರ, ದಾವಣಗೆರೆ, ಗದಗ, ಧಾರವಾಡ, ಮೈಸೂರು, ರಾಮನಗರ ಸೇರಿದಂತೆ ಹಲವೆಡೆ ಧಾರಕಾರವಾಗಿ ಮಳೆ ಸುರಿದಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಬಳಿಯ ಪಾರ್ವತಿ ಕಟ್ಟೆ ಸೇತುವೆ ಹತ್ತಿರ ರೈಲ್ವೇ ಹಳಿ ಮೇಲೆ ಮಣ್ಣು ಕುಸಿದಿದ್ದು, ಗ್ಯಾಂಗ್‍ಮನ್ ಸಮಯ ಪ್ರಜ್ಞೆಯಿಂದ ಮಣ್ಣನ್ನು ಕೂಡಲೇ ತೆರವು ಮಾಡಲಾಗಿದೆ. ಇಲ್ಲದಿದ್ದರೆ ದೊಡ್ಡ ಅನಾಹುತಗಳೇ ಸಂಭವಿಸುತ್ತಿತ್ತು.
Advertisement
ದಾವಣಗೆರೆಯ ಬಾಷಾನಗರ, ಶೇಖರಪ್ಪ ಬಡಾವಣೆ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ಕೆಲವು ಕಡೆ ನೀರಿನಲ್ಲಿ ಬೈಕು, ಕಾರುಗಳು ಮುಳುಗಡೆಯಾಗಿವೆ. ಅದೇ ಸಂದರ್ಭದಲ್ಲಿ ವಿದ್ಯುತ್ ಕೂಡ ಕೈಕೊಟ್ಟಿದೆ. ಇದರಿಂದ ಜನರು ಪರದಾಡುವಂತಾಯಿತು.
ಧಾರವಾಡ, ಗದಗದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ. ಇದೆಲ್ಲದರ ಮಧ್ಯೆ ಇತ್ತ ಮೈಸೂರು ದಸರೆಗೂ ಮಳೆ ಅಡ್ಡಿಯುಂಟುಮಾಡಿದೆ. ವಾರದ ಕೊನೆಯಲ್ಲಿ ಮೈಸೂರು ದಸರಾ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಪರದಾಡುವಂತಾಗಿದೆ. ರಾಮನಗರದಲ್ಲೂ ಅತಿಯಾದ ಮಳೆ ಸುರಿದಿದ್ದು, ವಾಹನ ಸಂಚಾರ ಸ್ಥಗಿತವಾಗಿ ಜನರು ಪರದಾಡುವಂತಾಗಿದೆ.