ಮಡಿಕೇರಿ: ಕೊಡಗಿನ ಮಹಾಮಳೆಯಿಂದ ತತ್ತರಿಸಿ ಹೋಗಿದ್ದು ನಿರಾಶ್ರಿತರಿಗಾಗಿ ಮಸೀದಿ ಮತ್ತು ಹೋಂ ಸ್ಟೇ, ಲಾಡ್ಜ್ ಗಳಲ್ಲೂ ಆಶ್ರಯ ನೀಡಲಾಗಿದೆ.
ಜಾತಿ, ಧರ್ಮ ಭೇದವೆನ್ನದೇ ನೂರಾರು ಮಂದಿ ಮಸೀದಿಯಲ್ಲಿ ಆಶ್ರಯ ಪಡೆದಿದ್ದಾರೆ. ಇತ್ತ ಮಡಿಕೇರಿ ತಾಲೂಕಿನ ಜೋಡುಪಾಲ, ಸಂಪಾಜೆ, ಅರೆಕಲ್ಲು, ಕಾಟಕೇರಿ ಮುಂತಾದ ಕಡೆಗಳಲ್ಲಿ ಪದೇ ಪದೇ ಭೂಕುಸಿತವಾಗಿದೆ. ಹೀಗಾಗಿ ಅರೆಕಲ್ಲಿನ ಬಹುತೇಕ ಮನೆಗಳಲ್ಲಿದ್ದವರನ್ನು ಸ್ವಯಂ ಸೇವಕರು ತೆರವು ಮಾಡಿದ್ದಾರೆ.
Advertisement
ಹಮ್ಮಿಯಾಲ, ಕಾಲೂರು, ದೇವಸ್ತೂರು ಗ್ರಾಮಗಳಲ್ಲಿ ಇರುವವರನ್ನು ಕರೆತಂದು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಡಿಕೇರಿಯಲ್ಲಿ ಹೋಂ ಸ್ಟೇ, ಲಾಡ್ಜ್ ಗಳನ್ನು ಪ್ರವಾಸಿಗರಿಗೆ ಕೊಡದೆ ಸಂತ್ರಸ್ತರಿಗೆ ಕೊಡಲು ಮುಂದಾಗಿದ್ದು, ಇದರಿಂದ ಪ್ರವಾಸಿಗರು ನಿರಾಶೆಯಿಂದ ತೆರಳುತ್ತಿದ್ದಾರೆ.
Advertisement
Advertisement
ಮೈಸೂರು, ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಂದ ಹಿರಿಯ ಅಧಿಕಾರಿಗಳು ಕೊಡಗಿನತ್ತ ಧಾವಿಸಿ ಬಂದಿದ್ದು, ಪರಿಹಾರ ಕಾರ್ಯದ ನೇತೃತ್ವ ವಹಿಸಿದ್ದಾರೆ. ಮೈಸೂರಿನ ಕೆ.ಆರ್. ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ವೈದ್ಯರ ತಂಡ ಆಗಮಿಸಿ ಜನರ ಶುಶ್ರೂಷೆಯಲ್ಲಿ ತೊಡಗಿದ್ದಾರೆ. ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚುವರಿ ಔಷಧಿಯನ್ನು ಪೂರೈಸಲಾಗಿದೆ.
Advertisement
ಹಿರಿಯ ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ, ಅಗ್ನಿ ಶಾಮಕದ ದಳ, ವಿಪತ್ತು ನಿರ್ವಹಣಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಕೂಡ ತಂಡೋಪತಂಡವಾಗಿ ಜಿಲ್ಲೆಗೆ ಬಂದು ಕಾರ್ಯೋನ್ಮುಖರಾಗಿದ್ದಾರೆ. ಸಂಪಾಜೆ, ಜೋಡುಪಾಲದಲ್ಲಿನ ಜನರ ರಕ್ಷಣೆಯ ಹೊಣೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಹಿಸಿಕೊಂಡಿದ್ದಾರೆ. ಆ ವಿಭಾಗದ ಜನರನ್ನು ಸುಳ್ಯದ ಕೆವಿಜಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸುಳ್ಯದಲ್ಲಿ ಹಲವು ಮಂದಿಗೆ ಆಶ್ರಯ ನೀಡಲಾಗಿದೆ.
ಇತ್ತ ಕೊಡಗಿನಲ್ಲಿ ವರುಣನ ಆರ್ಭಟಕ್ಕೆ ಬಸ್ ನಿಲ್ದಾಣದ ಮಳಿಗೆ ಕುಸಿದು ನೆಲಸಮವಾಗಿದೆ. ಪ್ರವಾಹದಿಂದ ನಲುಗಿ ಹೋಗಿರುವ ಜಿಲ್ಲೆಯ ಜನರಲ್ಲಿ ಮಳೆ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಕೆಲವರು ಬೆಟ್ಟದಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಮಡಿಕೇರಿಯ ಅನೇಕ ಸಂತ್ರಸ್ತರ ಶಿಬಿರಗಳಿಗೆ ನೀವು ಕೊಟ್ಟ ಆಹಾರ ಸಾಮಾಗ್ರಿಗಳನ್ನು ಮಳೆಯನ್ನು ಲೆಕ್ಕಿಸದೇ ಪಬ್ಲಿಕ್ ಸಿಬ್ಬಂದಿಗಳು ಜನರಿಗೆ ತಲುಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv