ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ನದಿ, ಹಳ್ಳ, ಕೊಳ್ಳ, ತೊರೆಗಳು ತುಂಬಿ ಹರಿಯುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯಲ್ಲಿ ಇವತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಉಳ್ಳಾಲದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ತೀರಕ್ಕೆ ಬೃಹದಾಕಾರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ನೇತ್ರಾವತಿ, ಕುಮಾರಧಾರ ಸೇರಿದಂತೆ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
Advertisement
Advertisement
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ನಾಳೆ ತಗ್ಗು ಪ್ರದೇಶದಲ್ಲಿ ನೆರೆಯಾಗುವ ಭೀತಿಯಿದೆ. ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ಬಿದ್ದಿದೆ. ಜೂನ್ ನಲ್ಲಿ ಮುಂಗಾರು ದುರ್ಬಲವಾಗಿದ್ದು, ಜುಲೈನಲ್ಲಿ ಮಳೆ ರೈತರ ಕೈ ಹಿಡಿದಿದೆ.
Advertisement
Advertisement
ಮತ್ತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಮಳೆಯಿಂದಾಗಿ ಹೊನ್ನಾವರದ ಕರ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮರಬಿದ್ದು 15 ತಾಸಿಗೂ ಹೆಚ್ಚುಕಾಲ ಮಂಗಳೂರು ಉಡುಪಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕರಾವಳಿ ಭಾಗದ ಹಲವು ರಸ್ತೆಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಕಾರವಾರದಲ್ಲಿ ಕೂಡ ಮಳೆಯ ಆರ್ಭಟಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಮಳೆ ಮತ್ತೆ ತೀವ್ರತೆ ಪಡೆಯುವ ಸಾಧ್ಯತೆ ಇರುವುದರಿಂದ ಜುಲೈ 24ರವರೆಗೆ `ರೆಡ್ ಅಲರ್ಟ್` ಘೋಷಿಸಲಾಗಿದ್ದು, 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಿದ್ದು, ದೇವಭಾಗ್, ಶಿರವಾಡ, ಸೇರಿದಂತೆ ಹಲವು ಭಾಗದಲ್ಲಿ ಕಡಲಕೊರೆತ ಹೆಚ್ಚಾಗುತ್ತಿದೆ. ಸಮುದ್ರದ ಅಬ್ಬರಕ್ಕೆ ನಾಡದೋಣಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶ ಹಾಗೂ ನದಿ ತಡದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಕೊಡಗಿನಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರುತ್ತಿದೆ.
ಬೆಂಗಳೂರಿನ ಹಲವೆಡೆ ರಾತ್ರಿಯೆಲ್ಲಾ ಮಳೆಯಾಗಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಗ್ಗೆಯಾದರೂ ಮಳೆ ನಿಲ್ಲದೆ ತುಂತುರು ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ರಸ್ತೆಗಳೆಲ್ಲ ನೀರು ನಿಂತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.