ಬಾಗಲಕೋಟೆ: ಭಾನುವಾರ ರಾತ್ರಿ ಪೂರ್ತಿ ಸುರಿದ ಭಾರೀ ಮಳೆಗೆ (Rain) ಈರುಳ್ಳಿ ಕೊಳೆತು ಹೋಗುತ್ತಿದ್ದು ಬಾಗಲಕೋಟೆ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಬಿಸಿಲು ಬೀಳದ ಕಾರಣ ಈರುಳ್ಳಿ (Onion) ಒಣಗದೇ ಹೊಲದಲ್ಲೇ ಕೊಳೆತು ಹೋಗುತ್ತಿವೆ. ಹೀಗಾಗಿ ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಈ ಬಾರಿ ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಕಬ್ಬು ಬೆಳೆ ಬಿಟ್ಟರೆ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ನಾಲ್ಕೇ ತಿಂಗಳಲ್ಲಿ ಫಸಲು ಬರುವುದರಿಂದ ಈ ಭಾಗದ ರೈತರು ಈರುಳ್ಳಿ ಬೆಳೆಯುತ್ತಾರೆ.
ಅಕ್ಟೋಬರ್ 11ರ ತಡರಾತ್ರಿ ಶುರುವಾದ ಮಳೆ ಈರುಳ್ಳಿ ಬೆಳೆಗಾರರ ಬಾಳಿಗೆ ಕೊಳ್ಳಿ ಇಟ್ಟಿದೆ. ಮಳೆನೀರಿನ ರಭಸಕ್ಕೆ ನೂರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ಕೊಚ್ಚಿ ಹೋಗಿ ಮಳೆ ನೀರಿನ ಜೊತೆ ಚರಂಡಿ ಸೇರಿತ್ತು.
ಇದರಿಂದ ಕಂಗಾಲಾಗಿರುವ ರೈತರು (Farmers) ಮಾರುಕಟ್ಟೆಯಲ್ಲಿ (Market) ಈಗ ಈರುಳ್ಳಿಗೆ ಉತ್ತಮ ಬೆಲೆ ಇರುವ ಕಾರಣ ಹಾಳಾಗಿರುವ ಈರುಳ್ಳಿ ಬಿಟ್ಟು ಅಳಿದುಳಿದ ಈರುಳ್ಳಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈರುಳ್ಳಿಯನ್ನು ಗುಡ್ಡೆಹಾಕಿ ಮಾರುಕಟ್ಟೆಗೆ ಸಾಗಿಸಲು ಮತ್ತೆ ಮಳೆ ಕಾಟ ಶುರುವಾಗಿದೆ. ಮೇಲಿಂದ ಮೇಲೆ ಜಿಟಿ ಜಿಟಿ ಮಳೆ ಆಗುತ್ತಿದ್ದು ಮೋಡ ಕವಿದ ವಾತಾವರಣ ತಿಳಿಯಾಗುತ್ತಿಲ್ಲ. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್
ಬಿಸಿಲು ಬಿದ್ದರೆ ಒಣಗಿಸಿ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಬಹುದು. ಆದರೆ ಮೋಡ ಕವಿದ ವಾತಾವರಣ ನಮಗೆ ದಿಕ್ಕು ತೋಚದಂತೆ ಮಾಡಿದೆ. ಎಕರೆ ಈರುಳ್ಳಿ ಬೆಳೆಯಲು 50 ರಿಂದ 60 ಸಾವಿರ ರೂ. ಖರ್ಚು ಮಾಡಿದ್ದೇವೆ, ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿಗೆ 4 ರಿಂದ 5 ಸಾವಿರ ರೂ. ಉತ್ತಮ ಬೆಲೆ ಇದೆ. ನಿರಂತರ ಸುರಿಯುತ್ತಿರುವ ಮಳೆ ಅಳಿದುಳಿದ ಈರುಳ್ಳಿಯನ್ನೂ ಕೊಳೆತು ಹೋಗುವಂತೆ ಮಾಡಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.