ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದ ಮಳೆ ಕೇರಳಕ್ಕೆ ತಿರುಗಿದ್ದು, ಇದರಿಂದ ಸಿಲಿಕಾನ್ ಸಿಟಿಯಲ್ಲೂ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯಿಂದಾಗುವ ಹಾನಿಯನ್ನು ತಪ್ಪಿಸಲು ಬಿಬಿಎಂಪಿ ಸಕಲ ಸಿದ್ಧತೆ ನಡೆಸಿದ್ದು, 28 ಪ್ರದೇಶಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.
ಮಲ್ಲೇಶ್ವರಂ ಐಪಿಪಿ ಸೆಂಟರ್ ನಲ್ಲಿ ಅಧಿಕಾರಿಗಳ ಸಭೆ ನಂತರ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು 28 ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲದೆ ಈಗಾಗಲೇ 848 ಕಿ.ಮೀ. ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮುಗಿದಿದೆ. 440 ಕಿ.ಮೀ. ಕಾಂಕ್ರಿಟ್ ಡ್ರೈನ್ ಮಾಡಲಾಗಿದೆ. ಇವುಗಳನ್ನು ವಾರ್ಷಿಕವಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ರಾಜಕಾಲುವೆಗಳಲ್ಲಿ ಸೋಲಾರ್ ಸೆನ್ಸರ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ರಸ್ತೆಗಳ ಮೇಲ್ವಿಚಾರಣೆಗಾಗಿ 24 ತಂಡ ರಚಿಸಲಾಗಿದ್ದು, ಮುಖ್ಯ ರಸ್ತೆಗಳಲ್ಲಿ ಶೀಲ್ಟ್, ಶೋಲ್ಡರ್ ಡ್ರೈನ್ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. 12 ಸಾವಿರ ಕಿ.ಮೀ. ವಾರ್ಡ್ ರಸ್ತೆಗಳ ನಿರ್ವಹಣೆಗೆ 12 ತಂಡ ರಚನೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚುವಂತೆ ಗುತ್ತಿಗೆದಾರರಿಗೂ ಸಹ ಸೂಚಿಸಲಾಗಿದೆ. ವಾರ್ಡ್ ರಸ್ತೆಗಳ ಗುಂಡಿ ಮುಚ್ಚಲು 48 ಕೋಟಿ ರೂ. ನೀಡಲಾಗಿದೆ. ಮರಗಳು ಬಿದ್ದಲ್ಲಿ ತೆರವು ಕಾರ್ಯಚರಣೆ ನಡೆಸಲು 21 ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ 4,430 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 61 ವಾರ್ಡ್‍ಗಳನ್ನು ಹೈರಿಸ್ಕ್ ಡೆಂಗ್ಯೂ ವಾರ್ಡ್‍ಗಳೆಂದು ಗುರುತಿಸಲಾಗಿದೆ. ಕಸದ ನಿರ್ವಹಣೆ ವಿಚಾರವಾಗಿ ಕ್ವಾರಿಗಳಲ್ಲಿ ಯಾವುದೇ ಸಮಸ್ಯೆಯ ಇಲ್ಲ. ಬೆಳ್ಳಳ್ಳಿ ಕ್ವಾರಿಯಲ್ಲಿ ಒಂದು ತಿಂಗಳು ಕಸ ಹಾಕಬಹುದು. ಸದ್ಯ ಪಕ್ಕದಲ್ಲೇ ಮತ್ತೊಂದು ಸ್ಥಳ ನೋಡಲಾಗಿದೆ. ಆಗಸ್ಟ್ 18ಕ್ಕೆ ಹೊಸ ಟೆಂಡರ್ ಆಗಲಿದೆ. ಮುಂದಿನ 3 ತಿಂಗಳು ಕಸ ಹಾಕಲು ಪಾಲಿಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಬಕ್ರೀದ್ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‍ನಲ್ಲೂ ಪ್ರಾಣಿಗಳ ತ್ಯಾಜ್ಯ ವಿಲೇವಾರಿಗೆ ಅವಕಾಶ ನೀಡಲಾಗಿದೆ. ನಿಗದಿತ ಸ್ಥಳಕ್ಕೆ ಪ್ರಾಣಿ ತ್ಯಾಜ್ಯ ನೀಡಬೇಕಾಗುತ್ತದೆ. ರಸ್ತೆ, ಮನೆ ಹತ್ತಿರ ಪ್ರಾಣಿ ತ್ಯಾಜ್ಯ ಹಾಕುವಂತಿಲ್ಲ ಎಂದು ಆಯುಕ್ತರು ಸೂಚಿಸಿದ್ದಾರೆ.
ಅಧಿಕಾರಿಗಳಿಗೆ ರಜೆ ಇಲ್ಲ
ಮಳೆ ಸಮಸ್ಯೆ ಮುಗಿಯೊವರೆಗೆ ಯಾರಿಗೂ ರಜೆ ಇಲ್ಲ. ತುರ್ತು ಅಗತ್ಯವಿದ್ದರೆ ಮಾತ್ರ ಮಾತ್ರ ರಜೆ ನೀಡಲಾಗುವುದು. ಅದಕ್ಕೂ ಸಹ ಆಯುಕ್ತರ ಅನುಮತಿ ಪಡೆಯಬೇಕಿದೆ. ಬಿಬಿಎಂಪಿ ಜೊತೆ ಸಿವಿಲ್ ಡಿಫೆನ್ಸ್ 63 ವಿಭಾಗವಿದ್ದು, ಒಂದು ತಂಡದಲ್ಲಿ 40 ರಿಂದ 50 ಜನರಿದ್ದಾರೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳು ಹಾಗೂ 28 ಅಗ್ನಿ ಶಾಮಕ ಸ್ಟೇಷನ್ ಗಳು ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.