– ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಿಗೆ ರೈಲು ಸೇವೆ
ನವದೆಹಲಿ/ಬೆಂಗಳೂರು: ಇಂಡಿಗೋ ಅಡಚಣೆಯಿಂದ (IndiGo’s Meltdown) ಪರದಾಡುತ್ತಿರುವ ಪ್ರಯಾಣಿಕರ ಸಂಕಷ್ಟ ನಿವಾರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ದೇಶದ ವಿವಿಧ ಸ್ಥಳಗಳಿಗೆ ತೆರಳಲು ಪರ್ಯಾಯ ಪ್ರಯಾಣ ಆಯ್ಕೆಗಾಗಿ ಹುಡುಕಾಡುತ್ತಿದ್ದವರಿಗೆ 89 ವಿಶೇಷ ರೈಲುಗಳನ್ನ ನಿಯೋಜನೆ ಮಾಡುವುದಾಗಿ ರೈಲ್ವೆ ಇಲಾಖೆ (Indian Railway Department) ಪ್ರಕಟಿಸಿದೆ. ಮುಂದಿನ ಮೂರು ದಿನಗಳಲ್ಲಿ ಎಲ್ಲ ವಯಲಗಳಲ್ಲೂ 89 ವಿಶೇಷ ರೈಲುಗಳನ್ನು ಓಡಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

ಹೌದು. ಇಂಡಿಗೊ ವಿಮಾನಯಾನ (IndiGo Airlines) ಸಂಸ್ಥೆಯ ಅವಾಂತರ ಶನಿವಾರವೂ ಮುಂದುವರಿಯಿತು. ಬೆಂಗಳೂರು, ಮುಂಬೈ, ನವದೆಹಲಿ, ಅಹಮದಾಬಾದ್, ಹೈದರಾಬಾದ್, ಗೋವಾ ಸೇರಿದಂತೆ ದೇಶಾದ್ಯಂತ 850 ವಿಮಾನಗಳ ಹಾರಾಟ ರದ್ದುಗೊಂಡಿತು. ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡಿದರು. ಇನ್ನೂ ಕೆಲವರು ಕಾದು ಕಾದು ಸುಸ್ತಾಗಿ ಏರ್ಪೋರ್ಟ್‌ನಲ್ಲೇ ನಿದ್ರೆಗೆ ಜಾರಿದ್ದ ಪ್ರಸಂಗ ಕಂಡುಬಂದಿತು. ಜೊತೆಗೆ ಶುಭಕಾರ್ಯಗಳಿಗೆ ತೆರಳಬೇಕಿದ್ದ ಕೆಲವರು ಗೋಳಾಡಿದ್ರು. ಇದಕ್ಕಾಗಿ ಪರ್ಯಾಯ ಪ್ರಯಾಣಕ್ಕಾಗಿ ಹುಡುಕಾಡಿದ್ರು, ಪ್ರಯಾಣಿಕರ ಪರದಾಟ ನಿವಾರಿಸಲು ರೈಲ್ವೆ ಇಲಾಖೆ ಈ ವಿಶೇಷ ರೈಲು ಸೇವೆ ಪ್ರಕಟಿಸಿದೆ.

ಎಲ್ಲೆಲ್ಲಿಗೆ ವಿಶೇಷ ರೈಲು?
ನವದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪಾಟ್ನಾ ಮತ್ತು ಹೌರಾ ಸೇರಿದಂತೆ ಪ್ರಮುಖ ಕೇಂದ್ರಗಳಿಂದ ರೈಲು ಸೇವೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸಂಚಾರ ಪರಿಸ್ಥಿತಿಯನ್ನು ಅವಲಂಬಿಸಿ ವಿಶೇಷ ರೈಲುಗಳ ಸಂಖ್ಯೆ ಮತ್ತು ಅವುಗಳ ಟ್ರಿಪ್‌ಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೇ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ವಲಯಗಳಲ್ಲೂ ರೋಲಿಂಗ್ ಸ್ಟಾಕ್ ಹಾಗೂ ಮಾನಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.

ಏರ್‌ಪೋರ್ಟ್‌ಗಳಲ್ಲಿ ರೈಲು ಮಾಹಿತಿ ಪ್ರಸಾರ
ಇನ್ನೂ ಕೊನೇ ಕ್ಷಣದಲ್ಲಿ ರೈಲುಗಳ ಆಯ್ಕೆಗಾಗಿ ಹುಡುಕಾಡುತ್ತಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಏರ್‌ಪೋರ್ಟ್‌ಗಳಲ್ಲೂ ವಿಶೇಷ ರೈಲುಗಳ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

