ಯುವತಿಗೆ ಋತುಸ್ರಾವ: ಟ್ವೀಟ್‍ಗೆ ತಡರಾತ್ರಿಯೇ ಅರಸೀಕೆರೆಯಲ್ಲಿ ಗೋಯಲ್‍ರಿಂದ ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ

Public TV
2 Min Read
piyush Goyal sanitary pads

– ಟೆಕ್ಕಿಯ ಒಂದೇ ಒಂದು ಟ್ವೀಟ್‍ಗೆ ಸಿಕ್ಕಿತು ವೈದ್ಯಕೀಯ ಸೌಲಭ್ಯ

ಬೆಂಗಳೂರು: ರೈಲಿನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮಾಸಿಕ ಋತುಸ್ರಾವ ಕಾಣಿಸಿಕೊಂಡಿದ್ದು, ಒಂದೇ ಒಂದು ಟ್ವೀಟ್‍ಗೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ತಡರಾತ್ರಿಯೇ ವಿದ್ಯಾರ್ಥಿನಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಿದ್ದಾರೆ.

ಆಗಿದ್ದೇನು?:
ಬೆಂಗಳೂರು-ಬಳ್ಳಾರಿ-ಹೊಸಪೇಟೆ ಪ್ಯಾಸೆಂಜರ್ ಟ್ರೈನ್ ನಲ್ಲಿ ಆರ್ಕಿಟೆಕ್ಟ್ ವಿದ್ಯಾರ್ಥಿನಿಯೊಬ್ಬಳು ಜನವರಿ 14ರಂದು ಪ್ರಯಾಣಿಸುತ್ತಿದ್ದಳು. ಮಾರ್ಗಮಧ್ಯದಲ್ಲಿ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡು ಋತುಸ್ರಾವವಾಗಿದೆ. ಈ ಕುರಿತು ಯುವತಿ ತನ್ನ ಜೊತೆಗೆ ಪ್ರಯಾಣಿಸುತ್ತಿದ್ದ ಯುವಕ ವಿಶಾಲ್ ಖಾನಾಪುರೆ ಹೇಳಿಕೊಂಡಿದ್ದಾಳೆ.

Indian Railway Train

ಯುವತಿಯ ತೊಳಲಾಟ ಕೇಳಿದ ಟೆಕ್ಕಿ ವಿಶಾಲ್ ಖಾನಾಪುರೆ, ಹೊಸಪೇಟೆ ಪ್ಯಾಸೆಂಜರ್ ಟ್ರೈನ್ ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪ್ರಯಾಣಿಸುತ್ತಿರುವ ನನ್ನ ಸ್ನೇಹಿತೆಯೊಬ್ಬಳಿಗೆ ಮಾಸಿಕ ಋತುಸ್ರಾವವಾಗಿದೆ. ಆಕೆಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಸ್ಯಾನಿಟರಿ ಪ್ಯಾಡ್ ಅಗತ್ಯವಿದೆ. ಆದಷ್ಟು ಬೇಗ ಸೌಲಭ್ಯಗಳನ್ನು ಒದಗಿಸಿ ಸರ್ ಎಂದು ಟ್ವೀಟ್ ಮಾಡಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ರೈಲ್ವೇ ಇಲಾಖೆಗೆ ಟ್ಯಾಗ್ ಮಾಡಿದ್ದರು. ಅಷ್ಟೇ ಅಲ್ಲದೆ ಯುವತಿ ಕುಳಿತಿರುವ ಟ್ರೈನ್, ಸೀಟ್ ನಂಬರ್ ಅನ್ನು ವಿಶಾಲ್ ಖಾನಾಪುರೆ ಟ್ವೀಟ್‍ನಲ್ಲಿ ತಿಳಿಸಿದ್ದರು.

ಟ್ವೀಟ್ ನೋಡಿ ತಕ್ಷಣವೇ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು, ವಿದ್ಯಾರ್ಥಿನಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ರೈಲ್ವೇ ಇಲಾಖೆ ಸಿಬ್ಬಂದಿ, ಅರಸೀಕೆರೆ ಜಂಕ್ಷನ್‍ಗೆ ಟ್ರೈನ್ ಬರುತ್ತಿದ್ದಂತೆ ವಿದ್ಯಾರ್ಥಿನಿಗೆ ಅಗತ್ಯವಿದ್ದ ಸ್ಯಾನಿಟರಿ ಪ್ಯಾಡ್, ಮಾತ್ರೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ತಡರಾತ್ರಿ 2 ಗಂಟೆಗೆ ಒದಗಿಸಿದ್ದಾರೆ.

ವಿದ್ಯಾರ್ಥಿನಿಗೆ ಅಗತ್ಯವಿದ್ದ ಸ್ಯಾನಿಟರಿ ಪ್ಯಾಡ್ ಹಾಗೂ ವೈದ್ಯಕೀಯ ಸೌಲಭ್ಯ ಸಿಕ್ಕ ಬಳಿಕ ಟ್ವೀಟ್ ಮಾಡಿರುವ ವಿಶಾಲ್ ಖಾನಾಪುರೆ ಅವರು, ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ಕೇವಲ ನಾಲ್ಕು ವರ್ಷದಲ್ಲಿ ದೇಶವು ಇಷ್ಟು ಬದಲಾಗಿದೆ. ಇದು ಅಚ್ಛೇ ದಿನ್. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿ ಸಚಿವರ ಪಿಯೂಷ್ ಗೋಯಲ್, ರೈಲ್ವೇ ಇಲಾಖೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *