– ಹೊರಡೋ ಸಮಯ, ಮಾರ್ಗದ ಬಗ್ಗೆ ಮಾಹಿತಿ
ಬೀದರ್: ಇದೇ ಮೊದಲ ಬಾರಿಗೆ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಬೀದರ್ ನ ಜನರು ಸೇರಿದಂತೆ ಉತ್ತರ ಕರ್ನಾಟಕದ ಮತದಾರರಿಗೆ ಇಂದು ಬೀದರ್ ಟು ಯಶವಂತಪುರ ವಿಶೇಷ ರೈಲನ್ನು ನೈರುತ್ಯ ರೈಲ್ವೆ ಒದಗಿಸಿದೆ.
ಮಂಗಳವಾರ ಉತ್ತರ ಕರ್ನಾಟಕದಲ್ಲಿ ಎರಡನೇಯ ಹಂತದಲ್ಲಿ ಮತದಾನ ನಡೆಯಲ್ಲಿದ್ದು, ಇದಕ್ಕಾಗಿ ಇಂದು ಸಂಜೆ 6.10ಕ್ಕೆ ಯಶವಂತಪುರದಿಂದ ಬೀದರ್ ಗೆ ತತ್ಕಾಲ್ ಎಕ್ಸ್ ಪ್ರೆಸ್ ವಿಶೇಷ ರೈಲು ಹೊರಡಲಿದೆ. ಇಂದು ಸಂಜೆ 6.10ಕ್ಕೆ ಯಶವಂತಪುರದಿಂದ ಹೊರಡಲಿರುವ ವಿಶೇಷ ರೈಲು ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಸೈದಾಪುರ, ಯಾದಗಿರಿ, ವಾಡಿ ಹಾಗೂ ಕಲಬುರಗಿ ಮಾರ್ಗವಾಗಿ ಏಪ್ರಿಲ್ 23ರ ಬೆಳಗ್ಗೆ 6 ಗಂಟೆಗೆ ಬೀದರ್ ತಲುಪಲಿದೆ.
Advertisement
Advertisement
ಅದೇ ವಿಶೇಷ ರೈಲು ಏಪ್ರಿಲ್ 23ರ ಸಂಜೆ 7 ಗಂಟೆಗೆ ಬೀದರ್ ನಿಂದ ಹೊರಡಲಿದ್ದು ಏಪ್ರಿಲ್ 24ರ ಬೆಳಗ್ಗೆ 8.15ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ. ಗಡಿ ಜಿಲ್ಲೆ ಬೀದರ್ ಸೇರಿದಂತೆ ಉತ್ತರ ಕರ್ನಾಟಕದಿಂದ ಕೆಲಸಕ್ಕಾಗಿ ಉದ್ಯೋಗಿಗಳು, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇದರಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಮತದಾರರಿಗೆ ಮತದಾನ ಮಾಡಲು ಯಾವುದೇ ಸಮಸ್ಯೆಯಾಗಬಾರದು ಎಂದು ನೈರುತ್ಯ ರೈಲ್ವೆ ಇಲಾಖೆ ಈ ರೀತಿ ವಿಶೇಷ ರೈಲನ್ನು ಮೊದಲ ಬಾರಿಗೆ ಒದಗಿಸಿದೆ.