ರಾಯಚೂರು: ತುಂಗಭದ್ರಾ ಜಲಾಶಯದಿಂದ (Tungabhadra Dam) ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವುದರಿಂದ ಗುರುರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನ (Vrundavana) ಜಲಾವೃತವಾಗಿದ್ದು, ರಾಯರ ಜಪದ ಕಟ್ಟೆ ಮುಳುಗಡೆಯಾಗಿದೆ.
ರಾಯಚೂರು (Raichuru) ತಾಲೂಕಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ರಾಯರ ಏಕಶಿಲಾ ಬೃಂದಾವನ ಜಲಾವೃತವಾಗಿದೆ. ತುಂಗಭದ್ರಾ ನದಿ (Tungabhadra River) ಮೈದುಂಬಿ ಹರಿಯುತ್ತಿರುವುದರಿಂದ ಬಿಚ್ಚಾಲಮ್ಮ ದೇವಿ ದೇವಾಲಯ ಬಳಿಯ ರಾಯರ ಬೃಂದಾವನಕ್ಕೆ ನೀರು ನುಗ್ಗಿದೆ.
ಏಕಶಿಲಾ ಬೃಂದಾವನ ದರ್ಶನ ಪಡೆಯಲು ಭಕ್ತರು ಪರದಾಟ ನಡೆಸಿದ್ದಾರೆ. ರಾಯರ ಬೃಂದಾವನಕ್ಕೆ ನೀರಿನಲ್ಲೇ ತೆರಳಿ ಅರ್ಚಕರು ಪೂಜೆ, ಅಭಿಷೇಕ ಮಾಡಲು ಸಾಹಸಪಡುತ್ತಿದ್ದಾರೆ.
ಗುರು ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ್ದ ಜಪದ ಕಟ್ಟೆ ಸಂಪೂರ್ಣ ಮುಳುಗಡೆಯಾಗಿದೆ. ಮಂತ್ರಾಲಯಕ್ಕೆ ಬರುವ ಭಕ್ತರು ಎಲೆಬಿಚ್ಚಾಲಿಗೆ ತಪ್ಪದೇ ಭೇಟಿ ನೀಡುತ್ತಾರೆ. ರಾಯರ ಪರಮ ಭಕ್ತ ಅಪ್ಪಣ್ಣಾಚಾರ್ ಬೃಂದಾವನ ನಿರ್ಮಿಸಿ ಈ ಹಿಂದೆ ಪೂಜೆ ಮಾಡಿದ್ದರು.
ಎಲೆಬಿಚ್ಚಾಲಿಯ ಬಿಚ್ಚಾಲಮ್ಮ ದೇವಾಲಯ ಸುತ್ತಲೂ ನೀರು ಆವರಿಸಿದೆ. ಇಲ್ಲಿನ ಉಗ್ರನರಸಿಂಹ ದೇವಾಲಯ, ನಾಗದೇವತೆ ಕಟ್ಟೆ, ಶಿವಲಿಂಗ ಜಲಾವೃತವಾಗಿದ್ದು ಮುಳುಗಡೆ ಹಂತದಲ್ಲಿವೆ.