– 800 ಮೆಗಾ ವ್ಯಾಟ್ ಸಾರ್ಮಥ್ಯದ ವಿದ್ಯುತ್ ಘಟಕ ಆರಂಭ
– ಆಧುನಿಕ ತಂತ್ರಜ್ಞಾನದ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಷನ್
ರಾಯಚೂರು: ರಾಜ್ಯದ ಬೇಸಿಗೆ ವಿದ್ಯುತ್ ಸಮಸ್ಯೆ ನೀಗಿಸಲು ಹೊಸದೊಂದು ಬೆಳಕು ಇಂದಿನಿಂದ ರಾಜ್ಯ ವಿದ್ಯುತ್ ಜಾಲಕ್ಕೆ ಸೇರಿಕೊಳ್ಳಲಿದೆ. ರಾಯಚೂರಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಅಧಿಕೃತವಾಗಿ ಇಂದಿನಿಂದ ಕಾರ್ಯಾರಂಭಿಸಿದೆ.
ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್ ವಾಣಿಜ್ಯಿಕ ವಿದ್ಯುತ್ ಉತ್ಪಾದನೆ ಆರಂಭವನ್ನ ಇಂದು ಘೋಷಿಸಿದರು. 800 ಮೆಗಾ ವ್ಯಾಟ್ ಸಾರ್ಮಥ್ಯದ ಮೊದಲ ಘಟಕ ಕಾರ್ಯಾರಂಭ ಆರಂಭಿಸಿದ್ದು, ರಾಜ್ಯದ ವಿದ್ಯುತ್ ಜಾಲಕ್ಕೆ ಹೊಸ ಬೆಳಕು ಸೆರ್ಪಡೆಯಾಗಿದೆ. ಎರಡು ಘಟಕಗಳಿಂದ 1600 ಮೆಗಾ ವ್ಯಾಟ್ ಸಾರ್ಮಥ್ಯದ ವೈಟಿಪಿಎಸ್ ನಿಂದ ಒಂದುವರೆ ವರ್ಷಕಾಲ ತಡವಾಗಿ ಮೊದಲ ಘಟಕ ಆರಂಭಗೊಂಡಿದೆ. ಆಧುನಿಕ ತಂತ್ರಜ್ಞಾನದಲ್ಲಿ ರೂಪುಗೊಂಡ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಷನ್ ಕಡಿಮೆ ಕಲ್ಲಿದ್ದಲು ಹಾಗೂ ನೀರನ್ನ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಿದೆ.
9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಸಂಗ್ರಹಣಾ ಸ್ಥಳದ ಅಭಾವ, ರೈಲು ಮಾರ್ಗದ ತೊಂದರೆ, ಬಾಯ್ಲರ್ ಟ್ಯೂಬ್ ಸೋರಿಕೆಯಂತ ತಾಂತ್ರಿಕ ಸಮಸ್ಯೆಗಳು ಘಟಕದ ಆರಂಭಕ್ಕೆ ಹಿನ್ನೆಡೆಯುಂಟು ಮಾಡಿದ್ದವು. ಕೆಪಿಸಿಎಲ್‍ನ ಕಲ್ಲಿದ್ದಲು ಬಾಕಿ 1500 ಕೋಟಿ ಪಾವತಿಯಾಗಿರುವುದರಿಂದ ಯಾವುದೇ ತೊಂದರೆಗಳಿಲ್ಲದೆ ಘಟಕ ನಡೆಯಲಿದ್ದು, ಕೃಷ್ಣ ನದಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ತಜ್ಞರ ತಂಡ ಪ್ರಾಯೋಗಿಕ ಪರೀಕ್ಷೆಗಳನ್ನ ಮುಗಿಸಿದ್ದು, ಪ್ರಯೋಗಾರ್ಥ ವಿದ್ಯುತ್ ಉತ್ಪಾದನೆ ಯಶಸ್ವಿಯಾಗಿದೆ.
ವೈಟಿಪಿಎಸ್ ವಿದ್ಯುತ್ ಕೇಂದ್ರದ ಕಾಮಗಾರಿಯನ್ನ ಬಿಎಚ್‍ಇಎಲ್ ಕಂಪನಿ ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಎರಡನೇ ಘಟಕದ ಕಾಮಗಾರಿಯೂ ಚುರುಕುಗೊಳ್ಳಲಿದೆ. ಈ ಮೂಲಕ ರಾಯಚೂರು ಜಿಲ್ಲೆ ಇಡೀ ರಾಜ್ಯಕ್ಕೆ ಆರ್‍ಟಿಪಿಎಸ್ ನಿಂದ 1720 ಮೆಗಾ ವ್ಯಾಟ್ ಹಾಗೂ ವೈಟಿಪಿಎಸ್ ನಿಂದ 800 ಮೆಗಾ ವ್ಯಾಟ್ ಸೇರಿ ಒಟ್ಟು 2520 ಮೆಗಾ ವ್ಯಾಟ್ ವಿದ್ಯುತ್‍ನ್ನ ಉತ್ಪಾದಿಸಿ ಬೆಳಕು ನೀಡುತ್ತಿದೆ.