ರಾಯಚೂರು: ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೆಟೋ ಬೆಳೆಗೆ ಸೂಕ್ತ ಬೆಲೆ ಸಿಗದೆ ರೋಸಿಹೋದ ರೈತರು ನಗರದ ಮಾರುಕಟ್ಟೆ ಬಳಿ ತಿಪ್ಪೆಗೆ ಸುರಿದು ಹೋಗಿರುವ ಘಟನೆ ನಡೆದಿದೆ. ಬೆಲೆ ಕುಸಿತ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತಂದ ಟೊಮೆಟೋಗಳನ್ನು ಬೀದಿಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತದೆ. ಕೆಜಿ ಟೊಮೆಟೋಗೆ 2ರೂ. ನಂತೆ ವರ್ತಕರು ದರ ನಿಗದಿ ಮಾಡಿದ್ದಾರೆ. ಆದರೆ ಕನಿಷ್ಠ 3 ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಮಾರಾಟ ಮಾಡದೇ ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕೆಲ ರೈತರು ತಿಪ್ಪೆಗೆ ಸುರಿದರೆ ಇನ್ನೂ ಕೆಲ ರೈತರು ಅಕ್ಕಪಕ್ಕದ ಜನರಿಗೆ, ಕೂಲಿಕಾರ್ಮಿಕರಿಗೆ, ಹೋಟೆಲ್ ಮಾಲೀಕರಿಗೆ ಉಚಿತವಾಗಿ ಟೊಮೆಟೋ ಹಂಚಿದ್ದಾರೆ. ಬಳಿಕ ಸುಮಾರು ಮೂರ್ನಾಲ್ಕು ಕ್ವಿಂಟಲ್ ಉಳಿದಿದ್ದು ಮಾರುಕಟ್ಟೆ ಎದುರೇ ರಸ್ತೆಗೆ ಎಸೆದಿದ್ದಾರೆ. ಒಂದು ಎಕರೆ ಟೊಮೆಟೋ ಬೆಳೆಯಲು ರೈತರು ಕನಿಷ್ಠ 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ.
Advertisement
ಹಗಲಿರುಳೆನ್ನದೆ ನೀರು ಕಟ್ಟಿದ್ದಾರೆ. ಮುದುರು, ಬೂದುರೋಗದ ಕಾಟವಿದ್ದು ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕಿದೆ. ಇಲ್ಲವಾದರೆ ಬೆಳೆಯೆ ಕೈಗೆಟುಕುವುದಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೇ ಇಲ್ಲವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೋ 10 ರಿಂದ 15 ರೂಪಾಯಿ ಕೆ.ಜಿ ಇದೆ. ಮಾರ್ಚ್ ತಿಂಗಳವರೆಗೂ ಟೊಮೆಟೋ ಬೆಳೆಯ ಸ್ಥಳೀಯ ಸೀಜನ್ ಇದ್ದು ಸದ್ಯಕ್ಕೆ ಬೆಲೆ ಏರಿಕೆ ಸಾಧ್ಯತೆಗಳಿಲ್ಲ.