ರಾಯಚೂರು: ರಾಯಚೂರು ವಿಶ್ವವಿದ್ಯಾಲಯ ತಕ್ಷಣವೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ನಗರದ ವಿವಿಧ ಕಾಲೇಜುಗಳ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು.
ಸರ್ಕಾರದಿಂದ ಆಶ್ವಾಸನೆ ಬೇಡ, ಆದೇಶ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದರು. ನಗರದ ಎಲ್.ವಿ.ಡಿ ಕಾಲೇಜ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ವಿದ್ಯಾರ್ಥಿಗಳು ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಫೆಬ್ರವರಿ 2017ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುಮೋದನೆ ನೀಡಲಾಗಿದೆ. ಆದರೆ ಇದುವರೆಗೂ ವಿವಿ ಆರಂಭವಾಗಿಲ್ಲ. ಕೇವಲ ವಿಶೇಷ ಅಧಿಕಾರಿಯನ್ನ ನೇಮಿಸಲಾಗಿದೆ.
Advertisement
Advertisement
ಸಚಿವ ಸಂಪುಟದಲ್ಲಿ ತೀರ್ಮಾನವಾಗಿ ಮೂರು ವರ್ಷಗಳಾಗುತ್ತಾ ಬಂದರೂ ಇದುವರೆಗೆ ರಾಜ್ಯಪಾಲರಿಂದ ಅಧಿಕೃತ ಆದೇಶ ಹೊರಬಂದಿಲ್ಲ. ವಿವಿ ಸ್ಥಾಪನೆಗೆ ಬಜೆಟ್ ನಲ್ಲಿ ಅನುದಾನವೂ ಘೋಷಣೆಯಾಗಿಲ್ಲ. ಹೀಗಾಗಿ ರಾಯಚೂರಿನ ವಿಧ್ಯಾರ್ಥಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ರಾಯಚೂರು, ಯಾದಗಿರಿ ಎರಡು ಜಿಲ್ಲೆಗಳನ್ನೊಳಗೊಂಡ ರಾಯಚೂರು ವಿವಿಗೆ ಶೀಘ್ರವೇ ಹಣಕಾಸಿನ ಅನುಮೋದನೆ ಮಾಡಬೇಕು, ರಾಜ್ಯಪಾಲರು ಅಂಗೀಕರಿಸಲು ಬೇಕಿರುವ ಪ್ರಕ್ರಿಯೆಗಳನ್ನ ಕೂಡಲೇ ಪೂರೈಸಬೇಕು ಎಂದು ಜಿಲ್ಲೆಯ ವಿವಿಧ ಶಿಕ್ಷಣ ಸ್ಥಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.