ರಾಯಚೂರು: ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಾ ಇದೆ. ಕಪ್ಪು ಹಣ ವಾಪಸ್ ತರುತ್ತೇನೆ ಎಂದವರು ಕಪ್ಪು ಹಣದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ರಿಜ್ವಾನ್ ಅರ್ಷದ್, ಅರಣ್ಯ ಒತ್ತುವರಿಗಾಗಿ ಆನಂದ್ ಸಿಂಗ್‍ರ ವಿರುದ್ಧ 15 ಕೇಸ್ ಗಳು ದಾಖಲಾಗಿವೆ. ಅವರಿಗೇ ಅರಣ್ಯ ಖಾತೆ ನೀಡುತ್ತಿದ್ದಾರೆ. ಈ ಡ್ರಾಮಾ, ಈ ಹಣದ ವ್ಯವಹಾರ ಎಲ್ಲವೂ ಹೊರಗೆ ಬರುತ್ತದೆ. ಜನರು ಎಲ್ಲವನ್ನು ನೋಡುತ್ತಿದ್ದಾರೆ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು.
ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಸದನದಲ್ಲಿ ಧ್ವನಿ ಎತ್ತುತ್ತೇವೆ. ಕಾಯ್ದೆ ಮೀರಿ ಸಾಲ ಪಡೆದು ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ರೀತಿಯಾಗಿ ಸಾಲ ಪಡೆದು ಬಜೆಟ್ ಮಂಡನೆ ಮಾಡಬಾರದೆನ್ನುವುದು ನಮ್ಮ ನಿಲುವು. ಕೇಂದ್ರ ಸರ್ಕಾರದಿಂದ 30 ಸಾವಿರ ಕೋಟಿ ಕಡಿಮೆ ಬರುತ್ತಿದೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯಕ್ಕೆ 30 ಸಾವಿರ ಕೋಟಿ ವಂಚನೆ ಮಾಡಿದ್ದರ ಬಗ್ಗೆ ನಾವು ತೀವ್ರವಾಗಿ ಪ್ರತಿಭಟನೆ ಮಾಡುತ್ತೇವೆ. ಅಲ್ಲಿಂದ ಕಡಿಮೆ ದುಡ್ಡು ಸಿಕ್ಕಿದೆ ಎಂದು ಇಲ್ಲಿನ ಜನರ ಮೇಲೆ ಹೊರೆ ಹಾಕೋದು ಸರಿಯಲ್ಲ ಎಂದು ರಿಜ್ವಾನ್ ವಾಗ್ದಾಳಿ ಮಾಡಿದರು.