ರಾಯಚೂರು: ಪಾಸಾಗಿದ್ದು ಏಳನೇ ತರಗತಿಯಾದರೂ ತಲೆ ಮಾತ್ರ ಇಂಜಿನಿಯರಿಂಗ್ ವಿದ್ಯಾರ್ಥಿಯದ್ದು. ಹೌದು ರಾಯಚೂರಿನ ಯುವಕ ಚೇತನ್ ಪ್ರಸಾದ್ ವೆಲ್ಡಿಂಗ್ ಕೆಲಸ ಮಾಡುತ್ತಲೇ ಫುಟ್ ಪೆಡಲ್ ಡಿಸ್‍ಪ್ಯಾನ್ಸರ್ ಸ್ಯಾನಿಟೈಸರ್ ಸ್ಟ್ಯಾಂಡ್ ತಯಾರಿಸಿದ್ದಾನೆ.
ಇದರಿಂದ ಕೈಯಿಂದ ಮುಟ್ಟದೇ, ಯಾರ ಸಹಾಯವೂ ಇಲ್ಲದೆ ಕಾಲಿನಿಂದ ಪೆಡಲ್ ಒತ್ತುವ ಮೂಲಕ ಸ್ಯಾನಿಟೈಸರ್ ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬಹುದು. ಸ್ಯಾನಿಟೈಸರ್ ಹಾಕಲು ವ್ಯಕ್ತಿ ಅವಶ್ಯಕತೆಯಿಲ್ಲ, ಸಮಯ ಉಳಿತಾಯ, ಕೈಯಲ್ಲಿ ಸ್ಯಾನಿಟೈಸರ್ ಬಾಟಲ್ ಮುಟ್ಟುವ ಹಾಗಿಲ್ಲ. ಈ ಉದ್ದೇಶ ಇಟ್ಟುಕೊಂಡು ಸ್ನೇಹಿತ ಅಮಿತ್ ದಂಡಿನ್ ಕೊಟ್ಟ ಐಡಿಯಾದಿಂದ ಚೇತನ್ ಈ ಯಂತ್ರ ತಯಾರಿಸಿದ್ದಾರೆ.
ಇದಕ್ಕೆ ಬ್ಯಾಟರಿ ಅಗತ್ಯವಿಲ್ಲ. ಕಬ್ಬಿಣ ಹಾಗೂ ಸ್ಟೇನ್ ಲೆಸ್ ಸ್ಟೀಲ್ ನಿಂದ ಯಂತ್ರ ಮಾಡುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ಸ್ಯಾನಿಟೈಸರ್ ಯಂತ್ರಗಳನ್ನು ಗಮನಿಸಿ ಹೊಸ ರೀತಿಯ ಯಂತ್ರವನ್ನು ತಯಾರಿಸಿದ್ದಾರೆ. ಒಂದು ಯಂತ್ರತಯಾರಿಕೆಗೆ ಒಂದು ಸಾವಿರ ರೂಪಾಯಿವರೆಗೆ ಖರ್ಚು ತಗುಲುತ್ತಿದ್ದು ಆಸಕ್ತರಿಗೆ 1,400 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ವಿವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಆರ್.ಟಿ.ಒ ಕಚೇರಿ ಸೇರಿದಂತೆ ಹಲವೆಡೆ ಇದೇ ಯಂತ್ರವನ್ನು ಬಳಸುತ್ತಿದ್ದಾರೆ. ಇನ್ನೂ 20 ಆರ್ಡರ್ ಗಳು ಸಹ ಬಂದಿವೆಯಂತೆ.