ರಾಯಚೂರು: ಬಿರು ಬೇಸಿಗೆಯಲ್ಲಿ ಮೇಲಗಡೆ ತಂಪು, ಕೆಳಗಡೆ ತಂಪು, ಅಲ್ಲಲ್ಲಿ ನಿಂತ ನೀರು, ತಣ್ಣನೆ ಮರಳಲ್ಲಿ ಮುಂಜಾನೆಯಿಂದ ಸಂಜೆವರೆಗೂ ಮದ್ಯಪಾನ. ಇದು ರಾಯಚೂರಿನ ದೇವದುರ್ಗದ ನಾರಾಯಣಪುರ ಬಲದಂಡೆ ಕಾಲುವೆಯ ಸೇತುವೆಗಳ ಕೆಳಗೆ ಕಂಡು ಬರುವ ಸಾಮಾನ್ಯ ದೃಶ್ಯ. ಬಿಸಿಲನಾಡು ರಾಯಚೂರಿನಲ್ಲಿ ಬರಗಾಲದಿಂದ ಖಾಲಿ ಖಾಲಿಯಾಗಿರುವ ಎನ್‍ಆರ್‍ಬಿಸಿ ಕಾಲುವೆಗಳು ಈಗ ಮದ್ಯವ್ಯಸನಿಗಳ ಹಾಟ್ ಸ್ಪಾಟ್‍ಗಳಾಗುತ್ತಿವೆ.
ಬಿರುಬಿಸಿಲಿನ ಝಳತಪ್ಪಿಸಿಕೊಂಡು ಮದ್ಯಪಾನಮಾಡಲು ವ್ಯಸನಿಗಳು ಕಾಲುವೆಯ ಸೇತುವೆಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಒಂದೆಡೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟಕ್ಕೆ ಕಿವಿಗೊಡದ ಸರ್ಕಾರದ ನಿಲುವು ಮದ್ಯಪಾನಿಗಳಿಗೆ ಅನುಕೂಲವಾಗಿದೆ. ನೀರಾವರಿ ಸಲಹಾ ಸಮಿತಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ ಕಾಲುವೆಗಳು ಖಾಲಿ ಖಾಲಿಯಾಗಿವೆ. ಹೀಗಾಗಿ ದಾರಿಹೋಕರು, ಪುಂಡಪೋಕರಿಗಳು, ಸುತ್ತಮುತ್ತಲ ಗ್ರಾಮಗಳ ಮದ್ಯವ್ಯಸನಿಗಳಿಗೆ ಸೇತುವೆ ಕೆಳಗಿನ ಕಾಲುವೆ ಜಾಗ ಮದ್ಯಪಾನಕ್ಕೆ ಹೇಳಿಮಾಡಿಸಿದಂತಾಗಿದೆ. ಮದ್ಯಪಾನ ಮಾಡಿ ಬಾಟಲ್, ಪೌಚ್, ನೀರಿನ ಪ್ಲಾಸ್ಟಿಕ್ ಗ್ಲಾಸ್‍ಗಳನ್ನ ಕಾಲುವೆಯಲ್ಲೇ ಎಸೆದು ಹೋಗುತ್ತಿದ್ದಾರೆ.
Advertisement
Advertisement
ನೀರಾವರಿ ಸಲಹಾ ಸಮಿತಿ ನಾರಾಯಣಪುರ ಬಲದಂಡೆ ಕಾಲುವೆಗೆ ಮಾರ್ಚ್ 26 ರಿಂದ 30 ರವರೆಗೆ ಐದು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿದೆ. ಆದ್ರೆ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ರೈತರಿಗೆ ನೀರು ತಲುಪುವುದು ಅನುಮಾನವಾಗಿದೆ. ಇನ್ನೂ ಕೇವಲ 5 ದಿನ ನೀರು ಹರಿಸಿದರೆ 16, 17, 18 ನೇ ವಿತರಣಾ ಕಾಲುವೆಗೆ ಹನಿ ನೀರು ಸಹ ತಲುಪುವುದಿಲ್ಲ ಅಂತ ರೈತರು ಆರೋಪಿಸಿದ್ದಾರೆ.
Advertisement
ಏಪ್ರಿಲ್ 10 ರವರೆಗೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟ ನಡೆಸಿದ್ದಾರೆ. ಕಾಳು ಕಟ್ಟಿರುವ ಭತ್ತ, ಶೇಂಗಾ ,ಕಡಲೆ ಬೆಳೆಗಳು ಒಣಗಿಹೋಗುತ್ತಿದ್ದು, ಕಾಲುವೆಯ ಕೆಳಭಾಗದ ರೈತರು ಬೆಳೆಹಾನಿ ಆತಂಕದಲ್ಲಿದ್ದಾರೆ. ಆದ್ರೆ ಸರ್ಕಾರ ಮಾತ್ರ ಕಾಲುವೆಗೆ ನೀರು ಬಿಡುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮದ್ಯ ವ್ಯಸನಿಗಳಿಗೆ ಸರ್ಕಾರವೇ ಜಾಗ ಹುಡುಕಿ ಕೊಟ್ಟಂತಾಗಿದೆ.
Advertisement
ಒಟ್ನಲ್ಲಿ, ಪವಿತ್ರ ಕೃಷ್ಣೆ ಹರಿಯಬೇಕಾದ ಸ್ಥಳದಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಬೆಳಿಗ್ಗೆಯಿಂದಲೇ ಠಿಕಾಣಿ ಹೂಡೋ ಕುಡುಕರು ಸಂಜೆ ವೇಳೆಗೆ ಮನೆಕಡೆ ತೆರಳುತ್ತಿದ್ದಾರೆ. ಕನಿಷ್ಟ ಈಗಲಾದ್ರೂ ಸರ್ಕಾರ ಎಚ್ಚೆತ್ತು ಕುಡುಕರ ತಾಣವಾಗುತ್ತಿರುವ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕಿದೆ. ರೈತರ ಬೆಳೆಗಳನ್ನ ರಕ್ಷಿಸಬೇಕಿದೆ.