ರಾಯಚೂರು: ನಾರಾಯಣಪುರ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಟ್ಟ ಹಿನ್ನೆಲೆ ರಾಯಚೂರಿನ ನಡುಗಡ್ಡೆಗಳ ಜನ ಆಹಾರ ಪದಾರ್ಥಗಳಿಗಾಗಿ ನದಿ ದಾಟಲು ಆಗದೆ ಪರದಾಡುತ್ತಿದ್ದಾರೆ.
ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದರೂ, ಅಗತ್ಯ ವಸ್ತುಗಳಿಗಾಗಿ ಕುರ್ವಕುರ್ದ ಮತ್ತು ಕುರ್ವಕುಲ ನಡುಗಡ್ಡೆಗಳ ಜನ ಅರಗೋಲಿನಲ್ಲೇ ನದಿ ಪಕ್ಕದ ಡೊಂಗರಾಂಪುರಕ್ಕೆ ಬರುತ್ತಿದ್ದಾರೆ. ಜಿಲ್ಲಾಡಳಿತ ಡಂಗೂರ ಸಾರುವ ಮೂಲಕ ಜನರನ್ನು ಶಿಫ್ಟ್ ಆಗುವಂತೆ ಸೂಚನೆ ನೀಡಿತ್ತು. ಸ್ಥಳಾಂತರಗೊಳ್ಳಲು ಒಪ್ಪದ ಗ್ರಾಮಸ್ಥರು ತೆಪ್ಪದಲ್ಲೇ ಓಡಾಡುತ್ತಿದ್ದಾರೆ.
ಜೀವ ರಕ್ಷಕ ಜಾಕೆಟ್‍ಗಳನ್ನು ನೀಡಿ ಗ್ರಾಮಸ್ಥರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ನಡುಗಡ್ಡೆಗಳ ಜನರ ಸುರಕ್ಷತೆಗಾಗಿ ಎನ್.ಡಿ.ಆರ್.ಎಫ್ ತಂಡ ಸ್ಥಳದ ವೀಕ್ಷಣೆಯನ್ನೂ ನಡೆಸಿದೆ. ಇನ್ನೂ ಕುರ್ವಕುಲ ದತ್ತಾತ್ರೇಯ ಪೀಠಕ್ಕೆ ಭಕ್ತರು ಅರಗೋಲಿನಲ್ಲೇ ಬಂದು ಹೋಗುತ್ತಿದ್ದಾರೆ. ಭಕ್ತರು ಸೆಫ್ಟಿ ಜಾಕೆಟ್ ಹಾಕಿಕೊಂಡು ಪೊಲೀಸ್ ಭದ್ರತೆಯಲ್ಲಿ ದೇವರ ದರ್ಶನ ಪಡೆದು ಹೋಗುತ್ತಿದ್ದಾರೆ. ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ಬೋಟ್ ವ್ಯವಸ್ಥೆ ಮಾಡಬೇಕು ಎಂದು ನಡುಗಡ್ಡೆಗಳ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.