– ಪ್ರಕರಣದಲ್ಲಿ ಬಾಲಕರು ಭಾಗಿ
ರಾಯಚೂರು: ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಕುಖ್ಯಾತ ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 5 ಲಕ್ಷ ಮೌಲ್ಯದ 115 ಮೊಬೈಲ್ ಜಪ್ತಿಮಾಡಿದ್ದಾರೆ. ಮೊಬೈಲ್ ಕಳ್ಳತನಕ್ಕೆ ಬಳಸಿದ ಒಂದು ಕಾರು, 3 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿರವಾರ ಮೂಲದ ರಂಗಪ್ಪ ನಾಯಕ ಎಂಬುವರ ಮೊಬೈಲ್ ಕಳ್ಳತನವಾಗಿತ್ತು. ಮೊಬೈಲ್ ಕಳೆದುಕೊಂಡ ರಂಗಪ್ಪ ದೂರು ನೀಡಿದ್ದರು. ರಂಗಪ್ಪ ನೀಡಿದ ದೂರಿನ ಅನ್ವಯ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳಾದ ತೆಲಂಗಾಣದ ಪೆದ್ದಪಲ್ಲಿ ಮುರಳಿ, ಹೈದ್ರಾಬಾದ್‍ನ ಕಿರಣ್‍ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟ ಆರೋಪಿಗಳು ತಮ್ಮ ಕೈಚಳಕದ ಬಗ್ಗೆ ತಿಳಿಸಿದ್ದಾರೆ. ಆರು ಜನ ಸೇರಿ ಮೊಬೈಲ್ ಕಳ್ಳತನ ನಡೆಸಿರುವ ಬಗ್ಗೆ ಖದೀಮರು ಬಾಯಿಬಿಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆ ಬಳಿಕ ಸಿರವಾರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪ್ರಕರಣದಲ್ಲಿ ಬಾಲಕರು ಸಹ ಪಾಲ್ಗೊಂಡಿದ್ದು ಅವರನ್ನು ಬಾಲನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ. ಮೊಬೈಲ್, ಕಾರು, ಬೈಕ್‍ಗಳು ಸೇರಿ ಒಟ್ಟು 10 ಲಕ್ಷ 9 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿಮಾಡಲಾಗಿದೆ.