ರಾಯಚೂರು: ಮಂತ್ರಾಲಯ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಕನ್ನಡ ಮಾತನಾಡುವ ಜನರಿರುವ ಕ್ಷೇತ್ರಗಳನ್ನು ಕರ್ನಾಟಕಕ್ಕೆ ಸೇರಿಸಲು ಪಕ್ಷಾತೀತವಾಗಿ ಸಿಎಂ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಶೀಘ್ರದಲ್ಲೇ ಭೇಟಿ ಮಾಡಿ ಮನವಿ ಮಾಡುವುದಾಗಿ ತೆಲುಗು ದೇಶಂ ಪಕ್ಷದ ಮುಖಂಡ ಪಿ.ತಿಕ್ಕಾರೆಡ್ಡಿ ಹೇಳಿದ್ದಾರೆ.
ಮಂತ್ರಾಲಯದಲ್ಲಿ ಮಾತನಾಡಿದ ತಿಕ್ಕಾರೆಡ್ಡಿ, ಮಂತ್ರಾಲಯ, ಆದೋನಿ, ಎಮ್ಮಿಗನೂರು, ಪತ್ತಿಕೊಂಡ ವಿಧಾನಸಭಾ ಕ್ಷೇತ್ರ ಸೇರಿದಂತೆ ಕರ್ನೂಲ್ ಲೋಕಸಭಾ ಕ್ಷೇತ್ರದಲ್ಲಿ ಕನ್ನಡ ಮಾತನಾಡುವವರೇ ಇದ್ದೇವೆ. ನಮ್ಮ ಮಾತೃ ಭಾಷೆ ಕನ್ನಡ, ನಮ್ಮ ಸಂಸ್ಕೃತಿ ಕನ್ನಡ ಇದೆ. ನಾವು ಹಳೆ ಬಳ್ಳಾರಿ ಜಿಲ್ಲೆಯವರು ಈಗಲೂ ನಮ್ಮನ್ನ ಬಳ್ಳಾರಿ ಜಿಲ್ಲೆಗೆ ಸೇರಿಸಿ ಎಂದರು. ನಮಗೆ ಬೆಂಗಳೂರೇ ರಾಜಧಾನಿಯಾಗಿರಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿಶಾಖಪಟ್ಟಣಂನ್ನ ಆಡಳಿತಾತ್ಮಕ ರಾಜಧಾನಿಯಾಗಿ ಮಾಡಿರುವುದರಿಂದ ನಮಗೆ ಬಹಳ ದೂರವಾಗುತ್ತದೆ. ಸುಮಾರು 800 ಕಿ.ಮೀ ದೂರ ಇರುವುದರಿಂದ ನಾವು ಅಲ್ಲಿಗೆ ಹೋಗಲು 20 ಗಂಟೆ ಸಮಯ ಬೇಕು ಎಂದು ಹೇಳಿದರು.
Advertisement
Advertisement
ಒಬ್ಬೊಬ್ಬ ಸಿಎಂ ಬಂದಾಗಲೂ ಒಂದೊಂದು ರಾಜಧಾನಿ ಮಾಡಿದರೆ ನಮಗೆ ಕಷ್ಟವಾಗುತ್ತೆ. ಹಾಗಾಗಿ ಕನ್ನಡ ಭಾಷೆ ಮಾತನಾಡುವ ನಮ್ಮನ್ನ ಕರ್ನಾಟಕಕ್ಕೆ ಸೇರಿಸಿ. ಮೊದಲು ನಮಗೆ ಕರ್ನೂಲ್ ರಾಜಧಾನಿ ಮಾಡಿದ್ದರು, ಆಮೇಲೆ ಹೈದರಾಬಾದ್ ಆಯ್ತು, ಬಳಿಕ ಅಮರಾವತಿ ಆಯ್ತು ಈಗ ಮೂರು ರಾಜಧಾನಿ ಮಾಡಿ ವಿಶಾಖಪಟ್ಟಣಂನಲ್ಲಿ ಆಡಳಿತ ನಡೆಸುತ್ತಾರೆ. ಮುಂದೆ ಬೇರೆ ಸಿಎಂ ಬಂದಾಗ ಪುನಃ ಬೇರೆ ರಾಜಧಾನಿ ಮಾಡುತ್ತಾರೆ. ಹೀಗಾಗಿ ನಮಗೆ ಆಂಧ್ರ ಪ್ರದೇಶದ ಸಹವಾಸವೇ ಬೇಡ ನಾವು ಕನ್ನಡದವರು ಕರ್ನಾಟಕಕ್ಕೆ ಸೇರಿಸಿ ಎಂದು ತಿಕ್ಕಾರೆಡ್ಡಿ ಎರಡು ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ.