-ವೈದ್ಯರ ಮೂಢನಂಬಿಕೆಗೆ ಜನಸಾಮಾನ್ಯರ ಪರದಾಟ
ರಾಯಚೂರು: ಮೂಢನಂಬಿಕೆ ಅನ್ನೋದು ಎಂಥವರನ್ನೂ ಬಿಟ್ಟಿಲ್ಲ. ಮನೆಯ ವಾಸ್ತುದೋಷದ ಬಗ್ಗೆ ಕೇಳಿರ್ತೀರಿ, ಸರ್ಕಾರಿ ಕಚೇರಿಗಳ ವಾಸ್ತುದೋಷದ ಬಗ್ಗೆಯೂ ಕೇಳಿರ್ತೀರಿ. ಆದ್ರೆ ವಿಜ್ಞಾನ ನಂಬುವ ವೈದ್ಯರಿಗೂ ವಾಸ್ತುದೋಷ ಕಾಡುತ್ತಿದೆ. ರಾಯಚೂರಲ್ಲಿ ವೈದ್ಯರ ಮೂಢನಂಬಿಕೆಗೆ ಪರದಾಡ್ತಿರೋದು ಮಾತ್ರ ಜನಸಾಮಾನ್ಯರು.
ರಾಯಚೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಾದ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಗಳ ನಡುವೆ ಮಾರ್ಗದ ಗೇಟ್ ಗೆ ಬೀಗ ಹಾಕಿದ್ದರಿಂದ ಜನರು ಕಾಂಪೌಂಡ್ ಜಿಗಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎರಡೂ ಆಸ್ಪತ್ರೆಗಳು ಅಕ್ಕಪಕ್ಕದಲ್ಲಿವೆ. ಔಷಧಿ, ಸ್ಕ್ಯಾನಿಂಗ್, ಕ್ಯಾಂಟಿನ್ ಪ್ರತಿಯೊಂದಕ್ಕೂ ಎರಡೂ ಆಸ್ಪತ್ರೆಗಳ ರೋಗಿಗಳು ಈ ಗೇಟ್ ದಾಟಲೇಬೇಕು. ಆದರೆ ದಕ್ಷಿಣಕ್ಕೆ ಇರೋ ಈ ಗೇಟ್‍ನ ವಾಸ್ತು ಸರಿಯಿಲ್ಲ. ಇದರಿಂದ ವೈದ್ಯರ ಏಳಿಗೆ ಆಗುತ್ತಿಲ್ಲ ಎಂದು ಎರಡು ಆಸ್ಪತ್ರೆ ವೈದ್ಯರು ಮಾತನಾಡಿಕೊಂಡು ಈ ಗೇಟ್‍ಗೆ ಬೀಗ ಜಡಿದಿದ್ದಾರೆ. ಇದರಿಂದ ರೋಗಿಗಳು ಮಾತ್ರ ಹೈರಾಣಾಗಿದ್ದಾರೆ.
Advertisement
Advertisement
ಈ ಆಸ್ಪತ್ರೆಗಳಿಗೆ ರಾಯಚೂರು ಮಾತ್ರವಲ್ಲದೆ ಯಾದಗಿರಿ ಹಾಗೂ ತೆಲಂಗಾಣದಿಂದಲೂ ರೋಗಿಗಳು ಬರ್ತಾರೆ. ವೈದ್ಯರು ಹೀಗೆ ಗೇಟ್ ಬಂದ್ ಮಾಡಿರೋದ್ರಿಂದ ರೋಗಿಗಳು ಹಾಗೂ ಸಂಬಂಧಿಕರು ಕಾಪೌಂಡ್ ಹಾರಿ ಇಲ್ಲವೇ, ಕಾಂಪೌಂಡ್ ಕೆಳಗಿಂದ ತೂರಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹೋಗ್ತಿದ್ದಾರೆ. ವಿದ್ಯಾವಂತರಾಗಿ ಸಾಮಾನ್ಯ ಜನರಿಗೆ ತಿಳಿ ಹೇಳಬೇಕಾದ ವೈದ್ಯರೇ ತಮ್ಮ ಮೂಢನಂಬಿಕೆಯಿಂದ ರೋಗಿಗಳಿಗೆ ತೊಂದರೆ ಕೊಡುತ್ತಿರುವುದು ನಿಜಕ್ಕೂ ದುರಂತವೇ ಸರಿ.
Advertisement