ರಾಯಚೂರು: ಒಂದೆಡೆ ಕೃಷ್ಣಾ ನದಿ ಪ್ರವಾಹದಿಂದ ಜನ ನೆಮ್ಮದಿ ಕಳೆದುಕೊಂಡು ಪರಿತಪಿಸುತ್ತಿದ್ರೆ, ಇನ್ನೊಂದೆಡೆ ಭ್ರಷ್ಟ ಅಧಿಕಾರಿಗಳು ನೆರೆ ಪರಿಹಾರ ಹಣದ ಮೇಲೂ ಕಣ್ಣಾಕಿದ್ದಾರೆ. ಯಾರಿಗೋ ಸಿಗಬೇಕಾದ ಪರಿಹಾರ ಹಣವನ್ನು ಇನ್ಯಾರೋ ಗುಳುಂ ಮಾಡಿದ್ದಾರೆ. ಭ್ರಷ್ಟ ಅಧಿಕಾರಿಗಳ ವಂಚನೆಯ ಸ್ಟೋರಿ ಇಲ್ಲಿದೆ.
Advertisement
ಹೌದು. ರಾಯಚೂರು ಜಿಲ್ಲೆ ದೇವದುರ್ಗದ ಬೊಮ್ಮನಾಳ, ಎಚ್.ತಿಮ್ಮಾಪುರ ಗ್ರಾಮಸ್ಥರು ಕೃಷ್ಣಾನದಿ ಪ್ರವಾಹಕ್ಕೆ ಬೆಳೆ ಕಳೆದುಕೊಂಡಿದ್ದಾರೆ. ನೆರೆ ಬಂದೂ ಅರ್ಧ ವರ್ಷ ಕಳೆದ್ರೂ ಇನ್ನೂ ಬೆಳೆ ಪರಿಹಾರ ಸಿಕ್ಕಿಲ್ಲ. ಆದರೆ ಸರ್ಕಾರ ಮಾತ್ರ ಇವರ ಹೆಸರಿನಲ್ಲಿ ಇನ್ಯಾರದ್ದೋ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ಜಮಾ ಮಾಡಿದ್ಯಂತೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷರ ವಂಚನೆಯಿಂದ ಪಹಣಿ, ಆಧಾರ್ ಸಂಖ್ಯೆ ಸೇರಿದಂತೆ ಇತರೆ ದಾಖಲೆಗಳನ್ನು ಬದಲಿಸಿ ನೆರೆಹಾವಳಿಗೆ ಸಂಬಂಧವೇ ಇಲ್ಲದ ರೈತರ ಖಾತೆಗೆ ಹಣ ಹಾಕಿ ಅಧಿಕಾರಿಗಳೇ ಲಕ್ಷ-ಲಕ್ಷ ಹಣವನ್ನು ಗುಳುಂ ಮಾಡಿದ್ದಾರೆ.
Advertisement
Advertisement
ಇದೇ ರೀತಿ 150ಕ್ಕೂ ಅಧಿಕ ರೈತರಿಗೆ ವಂಚನೆಯಾಗಿದೆ. ಲಕ್ಷಾಂತರ ರೂಪಾಯಿ ಹಣವನ್ನು ಅಧಿಕಾರಿಗಳೇ ತಿಂದು ತೇಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,400 ರೈತರು ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡಿದ್ದು 18 ಜನರಿಗೆ ಮಾತ್ರ ಜಿಲ್ಲಾಡಳಿತ ದಾಖಲೆ ಕೊರತೆಯಿಂದ ಹಣ ಜಮಾ ಮಾಡಿಲ್ಲ. ಆದರೆ ಅಧಿಕಾರಿಗಳ ಗೋಲ್‍ಮಾಲ್‍ನಿಂದ ಯಾರ್ಯಾರದ್ದೋ ಖಾತೆಗೆ ಹಣ ಹೋಗಿದೆ. ಅಧಿಕಾರಿಗಳಿಂದಾಗಿ ನೂರಾರು ಸಂತ್ರಸ್ತರಿಗೆ ವಂಚನೆಯಾಗಿದೆ. ರೈತರಿಗಾದ ಈ ವಂಚನೆಯನ್ನ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಒಪ್ಪಿಕೊಂಡಿದ್ದು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Advertisement
ಒಟ್ಟಿನಲ್ಲಿ ಸಂತ್ರಸ್ತರ ಪರಿಹಾರದ ಹಣದ ಮೇಲೂ ಭ್ರಷ್ಟ ಅಧಿಕಾರಿಗಳು ಕಣ್ಣಾಕಿರುವುದು ಮಾತ್ರ ದುರಂತ. ಹೀಗಾಗಿ ಸಂಬಂಧಪಟ್ಟವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ, ನೊಂದ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರವನ್ನ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.