ಅನ್ನದಾತರ ಅನ್ನ ಕಸಿದ ಕೊರೊನಾ- ಜೀವ ಉಳಿಸಿಕೊಳ್ಳಲು ಬೆಳೆ ಕಳೆದುಕೊಳ್ಳಲೇಬೇಕು!

Public TV
2 Min Read
RCR Farmers

– ಮೆಣಸಿನಕಾಯಿ, ಪಪ್ಪಾಯಿ ಬೆಳೆದ ರೈತರ ಲಕ್ಷಾಂತರ ರೂಪಾಯಿ ಬೆಳೆ ಹಾನಿ
– ಕೃಷಿ ಕೆಲಸಕ್ಕೆ ಅನುಮತಿ ಕೊಟ್ರೆ ಸಾಲದಿಂದ ಉಳಿಯುತ್ತೇವೆ ಅಂತ ರೈತರ ಅಳಲು

ರಾಯಚೂರು: ಕೊರೊನಾ ವೈರಸ್ ನ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ನಗರಪ್ರದೇಶ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಎಲ್ಲವೂ ಸಂಪೂರ್ಣ ಬಂದ್ ಆಗಿದೆ. ಕೃಷಿ ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತವಾಗಿವೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮೆಣಸಿನಕಾಯಿ, ಪಪ್ಪಾಯಿ ಸೇರಿ ಇತರೆ ಬೆಳೆಗಳನ್ನ ಬೆಳದ ರೈತರಿಗೆ ಉತ್ತಮ ಫಸಲು ಕೈಗೆ ಬಂದಿದ್ದರು. ಅದನ್ನು ಕಿತ್ತು ಮಾರಾಟ ಮಾಡಲಾಗದ ಸ್ಥಿತಿಯಿರುವುದರಿಂದ ಪ್ರತಿಯೊಬ್ಬ ರೈತ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾನೆ.

Corona Virus 10

ಪ್ರತಿ ಎಕರೆಗೆ 40 ರಿಂದ 50 ಸಾವಿರ ರೂಪಾಯಿವರೆಗೆ ಖರ್ಚುಮಾಡಿ ಬೆಳೆದಿರುವ ಮೆಣಸಿನಕಾಯಿ ಬೆಳೆಯನ್ನ ಒಂದೆಡೆ ಕೃಷಿ ಕಾರ್ಮಿಕರಿಲ್ಲದೆ ಗಿಡದಿಂದ ಬಿಡಿಸಲು ಆಗುತ್ತಿಲ್ಲ. ಇನ್ನೊಂದೆಡೆ ಈಗಾಗಲೇ ಮೆಣಸಿನಕಾಯಿ ಬಿಡಿಸಿದ ರೈತರಿಗೆ ಮಾರಾಟ ಮಾಡುವುದಿರಲಿ ಸಂಗ್ರಹಿಸಿಡಲು ಸೂಕ್ತವ್ಯವಸ್ಥೆಯಿಲ್ಲದೆ ಲಕ್ಷಾಂತರ ರೂಪಾಯಿ ನಷ್ಟದ ಹಾದಿಯಲ್ಲಿದ್ದಾರೆ. ಜಿಲ್ಲೆಯ ದೇವದುರ್ಗ, ಮಾನ್ವಿ ತಾಲೂಕಿನ ರೈತರ ಕೋಟ್ಯಂತರ ರೂಪಾಯಿ ಬೆಳೆ ಹಾಳಾಗುವ ಭೀತಿಯಲ್ಲಿದೆ.

Corona Virus 2

ಇನ್ನೂ ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ರೈತ ದೇವೇಂದ್ರಪ್ಪ 15 ಎಕರೆ ಹೊಲದಲ್ಲಿ ಬೆಳೆದ ಪಪ್ಪಾಯ ಬೆಳೆ ಹಾಳಾಗುತ್ತಿದೆ. ಈಗಾಗಲೇ ಎರಡು ಮೂರು ಟನ್ ಪಪ್ಪಾಯ ತಿಪ್ಪೆಪಾಲಾಗಿದೆ. ಕೊರೊನಾ ಭೀತಿಯಿಂದ ಮಾರುಕಟ್ಟೆ ಹಾಗೂ ಖರೀದಿದಾರರು ಇಲ್ಲದ ಕಾರಣ ಮಾರಾಟವಾಗದ ಪಪ್ಪಾಯಿ ಕೊಳೆತು ಹೋಗುತ್ತಿದೆ. ಸುಮಾರು 20 ಲಕ್ಷ ರೂಪಾಯಿ ಖರ್ಚುಮಾಡಿ ಬೆಳೆದಿದ್ದ ಬೆಳೆ ಸದ್ಯ ಸಮೃದ್ಧವಾಗಿ ಪಪ್ಪಾಯ ಹಣ್ಣುಗಳು ಬಂದಿದ್ದವು. ಆದ್ರೆ ಕೊರೊನಾ ವೈರಸ್ ಎಫೆಕ್ಟ್ ನಿಂದ ಎಲ್ಲವೂ ನಷ್ಟದ ಹಾದಿಯಲ್ಲಿದೆ.

Corona Virus 3

ಹೀಗಾಗಿ ರೈತರು ನಷ್ಟದಿಂದ ಸಾಲಕ್ಕೆ ಸಿಲುಕಿ ಬದುಕು ಕಳೆದುಕೊಳ್ಳುತ್ತೇವೆ ನಮಗೆ ರಕ್ಷಣೆ ಬೇಕು ಅಂತ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡು ಕೃಷಿ ಚಟುವಟಿಕೆ ಹಾಗೂ ಬೆಳೆಗಳನ್ನ ಸಂಗ್ರಹಾಗಾರಕ್ಕೆ ಸಾಗಿಸಲು ಅನುಮತಿಕೊಡಬೇಕು ಅಂತ ರೈತರು ಮನವಿ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *