– ಖರ್ಚು ಕಡಿಮೆ ಲಕ್ಷಾಂತರ ರೂ. ಲಾಭ
– 2 ಸಾವಿರ ಎಕರೆಯಲ್ಲಿ ಯಶಸ್ವಿ ಪ್ರಯೋಗ
ರಾಯಚೂರು: ಕೆಲ ಪ್ರಗತಿಪರ ರೈತರ ಹೊಸ ಪ್ರಯೋಗಗಳು ಯಶಸ್ವಿಯಾಗಿದ್ದು ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ. ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರ ಈ ಹೊಸ ಟೆಕ್ನಿಕ್ ಯಶಸ್ವಿಯಾಗಿದ್ದು, ಬದುಕು ಬಂಗಾರವಾಗುತ್ತಿದೆ.
ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲೂ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಲಾಭದಾಯಕ ಕೃಷಿ ಮಾಡಿ ಸುದ್ದಿಯಾಗಿದ್ದಾರೆ.
Advertisement
Advertisement
ನಾರಾಯಣಪುರ ಬಲದಂಡೆ ಕಾಲುವೆ ನೀರನ್ನೇ ನಂಬಿ ಕೃಷಿ ಮಾಡುತ್ತಿರುವ ಸಾವಿರಾರು ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳು ಸೇರಿ ಎಕರೆಗೆ 40 ರಿಂದ 50 ಸಾವಿರ ಖರ್ಚುಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದರು.
Advertisement
ಇದೀಗ ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ. ಖರ್ಚು ಬರುತ್ತಿದೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕ್ರಿಮಿನಾಶಕವಾಗಿ, ಪೋಷಾಕಾಂಶ ನೀಡುವ ಔಷಧಿಯಾಗಿಯೂ ಬಳಕೆ ಮಾಡಬಹುದು ಎಂಬದನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ.
Advertisement
ದೇವದುರ್ಗಾ ತಾಲೂಕಿನ ಗಬ್ಬೂರು ಸೇರಿದಂತೆ ಸುತ್ತಲಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿನ ರೈತರು ಈ ಪ್ರಯೋಗದಿಂದ ಯಶಸ್ವಿಯಾಗಿದ್ದಾರೆ. ಅಡುಗೆ ಎಣ್ಣೆಗಳಾದ ಪಾಮ್, ಶೇಂಗಾ, ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ, ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ, ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಬಹುದು ಎನ್ನುವುದನ್ನು ರೈತರು ಕಂಡುಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಮಿಶ್ರಣ ಹೇಗೆ?
ಮೆಣಸಿನಕಾಯಿ, ಹತ್ತಿ ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಬೆಳೆ ಬೆಳೆಯುತ್ತಿರುವಾಗ ಪ್ರತಿ ವಾರಕ್ಕೊಮ್ಮೆ ಈ ಔಷಧಿಯನ್ನು ಸಿಂಪಡಣೆ ಮಾಡಬೇಕು, ಇಲ್ಲಿ ಮುಖ್ಯವಾಗಿ ಅಡುಗೆ ಎಣ್ಣೆಯೊಂದಿಗೆ ನೀರು ಮಿಶ್ರಣ ಮಾಡಲು ಒಂದು ಮೀಡಿಯೇಟರ್ ಬೇಕು. ಅದಕ್ಕೆ ಅವರು ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡುತ್ತಾರೆ. ಈ ಮೊದಲು ಎಂಎಸ್ ಫೈರ್ ಎಂಬ ಔಷಧಿಯನ್ನು ಮಿಶ್ರಣಕ್ಕೆ ಬಳಸುತ್ತಿದ್ದರು. ಇದನ್ನು ಸಹ ಪ್ರತಿ 100 ಎಂ ಎಲ್ ಗೆ 40 ರೂಪಾಯಿ ಕೊಟ್ಟು ಖರೀದಿಸಬೇಕಾಗಿತ್ತು.
ಪ್ರತಿ ಎಕರೆಗೆ ಒಂದು ಕೆಜಿ ಅಡುಗೆ ಎಣ್ಣೆ ಹಾಗೂ ಅದಕ್ಕೆ ಆರು ಕೋಳಿ ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 19 ಲೀಟರ್ ನಂತೆ ನೀರನ್ನ ಬೆರೆಸಿ ಆರು ಟ್ಯಾಂಕ್ ಗಳ ಔಷಧಿಯನ್ನು ಸಿಂಪಡಣೆ ಮಾಡಬೇಕು. ನಿಗಿದಿತ ಸಮಯಕ್ಕೆ ಸರಿಯಾಗಿ ಸಿಂಪಡಣೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಪ್ರತಿ ಬಾರಿಯೂ ಔಷಧಿಗಾಗಿ ಅಡುಗೆ ಎಣ್ಣೆ ಪ್ರತಿ ಕೆಜಿಗೆ 60 ರಿಂದ 120 ರೂಪಾಯಿ, ಆರು ಮೊಟ್ಟೆಗಳಿಗೆ 40 ರೂಪಾಯಿ, ಕೂಲಿ 300 ರೂಪಾಯಿ ಹೀಗೆ ಕೇವಲ 450 ರೂಪಾಯಿಯಲ್ಲಿ ಔಷಧಿಯನ್ನು ಸಿಂಪಡಣೆ ಮಾಡಬಹುದು. ಆದೇ ರಸಾಯನಿಕ ಬಳಸಿದರೆ ಪ್ರತಿ ಲೀಟರ್ ಗೆ 1000-1500 ರೂಪಾಯಿ ಹಾಗು ರಸಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ.
ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ರೈತರು ಸಹ ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದಾರೆ.