– ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಅಧಿಕಾರಿಗಳ ಅಮಾನತು
ರಾಯಚೂರು: ಬೇಲಿಯೆ ಎದ್ದು ಹೊಲ ಮೇಯ್ದಂತೆ ಅನ್ನೋ ಹಾಗೆ ಬಾಲಕಿಯರನ್ನು ರಕ್ಷಣೆ ಮಾಡಬೇಕಾದ ರಾಯಚೂರಿನ ಸರ್ಕಾರಿ ಬಾಲಮಂದಿರದ ಓರ್ವ ಸೆಕ್ಯೂರಿಟಿ ಗಾರ್ಡ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಜಿಲ್ಲೆಯ ಬಾಲಮಂದಿರವೊಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದಯ್ಯ ಅತ್ಯಾಚಾರ ಎಸೆಗಿದ ಆರೋಪಿ. ಸಿದ್ದಯ್ಯ ನವೆಂಬರ್ 11ರಂದು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
Advertisement
Advertisement
ಪ್ರಕರಣದ ಬಗ್ಗೆ ಮಾಹಿತಿ ತಿಳಿದ ಬಾಲಕಿಯ ಅಣ್ಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ. ಆದರೆ ಈ ದೂರಿನ ಬಳಿಕವೂ ಬಾಲಮಂದಿರ ಅಧಿಕಾರಿಗಳಾದ ಸಯ್ಯದ್ ಪಾಷಾ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರುಪ್ರಸಾದ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಾರೆ. ಬಳಿಕ ಒತ್ತಡದ ಮೇರೆಗೆ ಕೊನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಯಚೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಬಾಲಮಂದಿರಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
Advertisement
ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಅವರು ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಯ್ಯದ್ ಪಾಷಾ ಹಾಗೂ ಗುರುಪ್ರಸಾದ್ ಅವರನ್ನ ಅಮಾನತು ಮಾಡಿದ್ದಾರೆ. ಘಟನೆಯನ್ನ ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಬಾಲಕಿಯರ ಬಾಲಮಂದಿರದಲ್ಲಿಯ ಲೋಪಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸಹಾಯಕ ಆಯುಕ್ತರಿಗೆ ಸೂಚಿಸಿದ್ದು, ತನಿಖಾ ತಂಡಗಳನ್ನ ರಚಿಸಲಾಗಿದೆ.
Advertisement
ಆರೋಪಿ ಸಿದ್ದಯ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಂಡಿರುವುದಾಗಿ ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ. ನಾನಾ ಕಾರಣಕ್ಕೆ ಬಾಲಮಂದಿರ ಸೇರುವ ವಿದ್ಯಾರ್ಥಿನಿಯರಿಗೆ ರಕ್ಷಣೆ ಸಿಗಬೇಕಾದ ಸ್ಥಳದಲ್ಲೇ ರಕ್ಷಣೆ ಇಲ್ಲದಿರುವುದು ದುರಂತವೇ ಸರಿ. ಈಗಲಾದರೂ ಅಧಿಕಾರಿಗಳು ಬಾಲಮಂದಿರದ ವಾತಾವರಣವನ್ನೇ ಬದಲಿಸಬೇಕಿದೆ.