ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಡಿಯಾರ ವೃತ್ತದಲ್ಲಿ ಜಮಾಯಿಸಿದ ನೂರಾರು ಮುಸ್ಲಿಂ ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪೌರತ್ವ ಕಾಯ್ದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು. ಪೌರತ್ವ ಕಾಯ್ದೆ ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದರು.
ದೇಶದ ಜಾತ್ಯಾತೀತ ತತ್ವವನ್ನು ನಾಶ ಮಾಡುವ ಕಾಯ್ದೆಯನ್ನು ಯಾರು ಬೆಂಬಲಿಸುವುದಿಲ್ಲ. ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಕಾಯ್ದೆಗೆ ನಮ್ಮ ವಿರೋಧ ಇದೆ ಎಂದು ಘೋಷಣೆ ಕೂಗಿದರು. ಕೂಡಲೇ ಕಾಯ್ದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಜನ ಯುವಕರು ಪಾಲ್ಗೊಂಡಿದ್ದರು.