ರಾಯಚೂರು: ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಕೃಷಿ ತಾಂತ್ರಿಕ ಪದವಿಧರರನ್ನು ಕಡೆಗಣಿಸಿದ್ದನ್ನ ಖಂಡಿಸಿ ರಾಯಚೂರು ಕೃಷಿ ವಿವಿ ಎಂಜಿನಿಯರ್ ವಿದ್ಯಾರ್ಥಿಯೋರ್ವ ಮೊಬೈಲ್ ಟವರ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.
ರಾಯಚೂರು ಕೃಷಿ ವಿವಿಯಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಸಂಕೇತ್ ನಗರದ ಲಿಂಗಸುಗೂರು ರಸ್ತೆಯಲ್ಲಿರುವ ಎಸಿಬಿ ಕಚೇರಿ ಬಳಿಯ ಟವರ್ ಹತ್ತಿ ಸುಮಾರು 2 ಗಂಟೆಗಳ ಕಾಲ ಹೋರಾಟ ನಡೆಸಿದ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ. ಕೊನೆಗೆ ಅಧಿಕಾರಿಗಳು ಸಮಯಪ್ರಜ್ಞೆ ಮೆರೆದು ಮನವೊಲಿಸಿದ್ದರಿಂದ ಸಂಕೇತ್ ಕೆಳಗಿಳಿದಿದ್ದಾನೆ.
Advertisement
ಸ್ಥಳಕ್ಕೆ ಧಾವಿಸಿದ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕೂಡಲೇ ಸರ್ಕಾರದ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಒತ್ತಾಯಿಸುವುದಾಗಿ ಹೇಳಿದರು.
Advertisement
ಕಳೆದ 7 ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬೀಗ ಜಡಿದು ಹೋರಾಟ ನಡೆಸಿದರೂ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ.
Advertisement
Advertisement
ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಸೆಪ್ಟೆಂಬರ್ 16, 2016 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನ ಕೈಬಿಡಲಾಗಿದೆ. ಈ ಮೊದಲು ಹೊರಡಿಸಿದ್ದ ಗೆಜೆಟ್ ಅಧಿಸೂಚನೆಗಳಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಇಂಜಿನಿಯರಿಂಗ್ ಪದವಿಯನ್ನು ಪರಿಗಣಿಸಲಾಗಿತ್ತು. ಈಗಲೂ ಪರಿಗಣಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಫೆಬ್ರವರಿ 23 ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂತಿಮವಾಗಿ ಮನವಿಯನ್ನು ಸಲ್ಲಿಸುತ್ತೇವೆ. ಸಮಸ್ಯೆಗೆ ಸ್ಪಂದಿಸದಿದ್ದರೇ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಅಂತ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.