ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ಸಹಾಯ ಕುರಿತು ಗ್ಯಾಂಗ್ ರೇಪ್ ಗೆ ಒಳಗಾಗಿ ಮೃತಪಟ್ಟ ನಿರ್ಭಯಾ ತಂದೆ ಬಿಚ್ಚಿಟ್ಟಿದ್ದಾರೆ.
ನನ್ನ ಮಗಳು ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಬಳಿಕ ರಾಹುಲ್ ಕುಟುಂಬವು ಸಹಾಯ ಹಾಗೂ ಬೆಂಬಲ ನೀಡಿತ್ತು. ಆದರೆ ನಾವು ಸಹಾಯ ಮಾಡಿರುವ ವಿಚಾರವನ್ನು ಯಾವುದೇ ಕಾರಣಕ್ಕೂ ಬಹಿರಂಗ ಮಾಡಬಾರದು ಎಂದು ಅವರು ನಮಗೆ ಕಟ್ಟುನಿಟ್ಟಾಗಿ ತಿಳಿಸಿದ್ದರು ಎಂದು ಬದ್ರಿನಾಥ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನನ್ನ ಮಗಳು ಅತ್ಯಚಾರಕ್ಕೊಳಗಾಗಿದ್ದಾಗ ನಮ್ಮ ಕುಟುಬವು ಆಘಾತಕ್ಕೊಳಗಾಗಿತ್ತು. ನನ್ನ ಮಗ ಆಗ 12 ನೇ ತರಗತಿ ಓದುತ್ತಿದ್ದನು. ಆಗ ರಾಹುಲ್ ಗಾಂಧಿಯವರು ನನ್ನ ಮಗನ ಜೊತೆ ಫೋನಿನಲ್ಲಿ ಮಾತನಾಡಿ ನನ್ನ ಮಗನನ್ನು ಪ್ರೇರೆಪಿಸಿದ್ದರು. ಅವರು ನನ್ನ ಮಗನಿಗೆ ಏನಾದರೂ ಸಾಧಿಸ ಬೇಕು ಎಂದು ತಿಳಿಸಿದಾಗ, ನನ್ನ ಮಗ ಸೇನೆಗೆ ಸೇರುವ ವಿಚಾರವನ್ನು ತಿಳಿಸಿದ್ದ. ಈ ವೇಳೆ ಅವರು ಶಾಲೆ ಮುಗಿದ ಬಳಿಕ ಪೈಲೆಟ್ ತರಬೇತಿ ಪಡೆಯಲು ಹಣ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದರು.
ಡಿಸೆಂಬರ್ 16ರ ರಾತ್ರಿ ನಮ್ಮ ಮಗಳು ಅತ್ಯಾಚಾರ ಘಟನೆ ಬಳಿಕ ರಾಹುಲ್ ಗಾಂಧಿಯವರು ನಮ್ಮನ್ನು ನೋಡಿಕೊಂಡರು. ನಿರ್ಭಯಾ ಘಟನೆಯು ನಮಗೆ ಶಾಶ್ವತವಾಗಿ ಮಾಸದ ಗಾಯವಾಗಿದ್ದು, ಅಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ನಮಗೆ ದೇವರಂತೆ ಸಹಾಯ ಮಾಡಿದ್ದರು. ನನ್ನ ಮಗ ಈಗ ಪೈಲೆಟ್ ಆಗಿದ್ದಾನೆ. ಕೆಲ ದಿನಗಳ ಹಿಂದೆ ತರಬೇತಿ ಮುಗಿಸಿ ಈಗ ಇಂಡಿಗೋ ವಿಮಾನದಲ್ಲಿ ಪೈಲೆಟ್ ಆಗಿ ಆಯ್ಕೆ ಆಗಿದ್ದಾನೆ. ರಾಹುಲ್ ಗಾಂಧಿ ಆರ್ಥಿಕ ಸಹಾಯ ನೀಡದೇ ಇದ್ದಿದ್ದರೆ ನಮ್ಮ ಮಗನನ್ನು ಪೈಲೆಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.