Friday, 20th July 2018

Recent News

ನಾಳೆ ರಾಹುಲ್ ಗಾಂಧಿ ಕರಾವಳಿ ಪ್ರವಾಸ – ರಾಜಕೀಯ ತರಬೇತಿ ಕೇಂದ್ರ ಉದ್ಘಾಟಿಸಿ ರೋಡ್ ಶೋ

ಉಡುಪಿ: ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರದಿಂದ ಕರಾವಳಿ ಪ್ರವಾಸ ಕೈಗೊಳ್ಳಲಿದ್ದಾರೆ.

ಮಾರ್ಚ್ 20 ಮತ್ತು 21 ರಂದು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎರಡನೇ ಹಂತದ ಯಾತ್ರೆ ನಡೆಸಲಿದ್ದಾರೆ. ಪಕ್ಷದ ಮೀಟಿಂಗ್- ಸಾರ್ವಜನಿಕ ಸಭೆಯ ಜೊತೆ ರಾಗಾ ಹಿಂದೂ ಕ್ರಿಶ್ಚಿಯನ್ ಮತ್ತು ಮುಸಲ್ಮಾನ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೂ ಭೇಟಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರನ್ನು ಮೊದಲ ಬಾರಿಗೆ ಕರಾವಳಿಗೆ ಸ್ವಾಗತಿಸಲು ಕಾಂಗ್ರೆಸ್ ಸಜ್ಜಾಗಿದೆ.

ನಾಳೆ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್, ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಉಡುಪಿ ಜಿಲ್ಲೆಯ ತೆಂಕ ಎರ್ಮಾಳು ಎಂಬಲ್ಲಿ ರಾಜೀವ್ ಗಾಂಧಿ ರಾಜಕೀಯ ತರಬೇತಿ ಸಂಸ್ಥೆ ಉದ್ಘಾಟನೆ ಮಾಡಲಿದ್ದಾರೆ. ಸುಮಾರು 350 ಮಂದಿ ಸೇವಾದಳದ ಕಾರ್ಯಕರ್ತರನ್ನು ಉದ್ದೇಶಿಸಿ ರಾಗಾ ಮಾತನಾಡಲಿದ್ದಾರೆ. ಬಳಿಕ ಪಡುಬಿದ್ರೆ ತನಕ ಸುಮಾರು ನಾಲ್ಕು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಪಡುಬಿದ್ರೆ ಜಂಕ್ಷನ್ ನಲ್ಲಿ ಸುಮಾರು 15 ಸಾವಿರ ಜನರನ್ನು ಉದ್ದೇಶಿಸಿ ರಾಹುಲ್ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗ್ರಾಮ ಮಟ್ಟದ ಸಭೆಗಳನ್ನು ಮಾಡಿದ್ದೇವೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಜೋಡಣೆ ಮಾಡುವ ಕೆಲಸಕಾರ್ಯಗಳು ಆಗಿದೆ. ಪಡುಬಿದ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಕಾರ್ನರ್ ಮೀಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮೀಟಿಂಗ್ ಆಗಿದೆ. 1983ರಲ್ಲಿ ರಾಜೀವ್ ಗಾಂಧಿ ನನ್ನ ಕ್ಷೇತ್ರ ಪುತ್ತೂರಲ್ಲಿ ಪ್ರಚಾರ ಭಾಷಣ ಉದ್ಘಾಟಿಸಿದ್ದರು. ಈಗ ರಾಹುಲ್ ಗಾಂಧಿ ಅವರು ನನ್ನ ಕಾಪು ಕ್ಷೇತ್ರಕ್ಕೆ ಬರುತ್ತಿರುವುದು ಸುಯೋಗ ಅಂತ ಹೇಳಿದ್ರು.

ರಾಹುಲ್ ಕರಾವಳಿ ಪ್ರವಾಸದ ಹೊತ್ತಿಗೇ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಸುದ್ದಿ ಜೋರಾಗಿ ಚರ್ಚೆಯಾಗುತ್ತಿದೆ. ಇದೇ ತಿಂಗಳಾಂತ್ಯಕ್ಕೆ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನಲಾಗುತ್ತಿದೆ. ಆದ್ರೆ ಇದನ್ನು ಸಾರಾ ಸಗಟಾಗಿ ಅಲ್ಲಗಳೆದಿರುವ ಅವರು ನಾನೇ ರಾಹುಲ್ ಗಾಂಧಿಯವರನ್ನು ಸ್ವಾಗತಿಸುವುದರಲ್ಲಿ ಮೊದಲಿಗ. ಸುಳ್ಳು ಅಪಪ್ರಚಾರಗಳಿಗೆ ಜನ ಕಿವಿಗೊಡಬಾರದು. ರಾಹುಲ್ ಗಾಂಧಿ ಕರಾವಳಿಗೆ ಬರುತ್ತಿರುವುದು ಯುವಕರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ರಾಜಕೀಯ ಸಮಾವೇಶದ ಜೊತೆ ಮಂಗಳೂರಿನ ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನ, ರೋಜಾರಿಯೋ ಚರ್ಚ್, ಉಳ್ಳಾಲ ದರ್ಗಾಕ್ಕೆ ಭೇಟಿಯಾಗಲಿದ್ದಾರೆ. ಒಟ್ಟಿನಲ್ಲಿ ಕರಾವಳಿ ಜಿಲ್ಲೆಯಲ್ಲಿ ರಾಹುಲ್ ಪ್ರವಾಸ ಯುವಕರಲ್ಲಿ ಚೈತನ್ಯ ಹುಟ್ಟಿಸಿದೆ.

Leave a Reply

Your email address will not be published. Required fields are marked *