ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

Public TV
2 Min Read
rahul gandhi a 1

ನವದೆಹಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.

ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ, ಉತ್ತರ ಪ್ರದೇಶದ ಅಮೇಥಿ ಜೊತೆ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆಯ ಉದ್ದೇಶದಿಂದ ಕಾಂಗ್ರೆಸ್ ನಾಯಕರಾದ ರಣ್‍ದೀಪ್ ಸುರ್ಜೆವಾಲಾ ಸಮ್ಮುಖದಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತಲು ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.

rahul gandhi

ರಾಹುಲ್ ಗಾಂಧಿಯವರ ಸ್ಪರ್ಧೆ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯ ಜನರು ನಿಮ್ಮನ್ನು ತಿರಸ್ಕರಿಸಿದ್ದು, ಇಲ್ಲಿಯ ಸಿಂಹಾಸನ ಖಾಲಿ ಮಾಡಿ ಎಂದು ಭಾಗ್ ರಾಹುಲ್ ಭಾಗ್ ಎಂದು ವ್ಯಂಗ್ಯ ಮಾಡಿದ್ದರು. ಸ್ಮೃತಿ ಇರಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎ.ಕೆ.ಆಂಟನಿ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮತ್ತು ವಾರಣಾಸಿ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಹಾಗಾದ್ರೆ ಅಂದು ಮೋದಿ ಅವರಿಗೆ ಗುಜರಾತಿನಲ್ಲಿ ಸೋಲಿನ ಭೀತಿ ಕಾಣಿಸಿತ್ತಾ? ಎರಡು ಕ್ಷೇತ್ರಗಳಲ್ಲಿ ಗೆಲುವಿನ ಬಳಿಕ ಗುಜರಾತ್ ಕ್ಷೇತ್ರವನ್ನು ತೊರೆದರು. ಸ್ಮೃತಿ  ಇರಾನಿ ಅವರನ್ನು ದೆಹಲಿಯ ಚಾಂದಿನಿ ಚೌಕ್ ಮತ್ತು ಅಮೇಥಿಯ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. ಇದೀಗ ಮತ್ತೊಮ್ಮೆ ಸ್ಮೃತಿ  ಇರಾನಿ ಸೋಲು ಕಾಣಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಗೆಲವು ಕಾಣುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಬೇಡಿಕೆ ಇಟ್ಟಿದ್ದೆವು. ಇತ್ತ ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದರು ಎಂದು ಕೇರಳದ ಕಾಂಗ್ರೆಸ್ ಮುಖಂಡ ಚೆನ್ನಿತಾಲಾ ಹೇಳಿದ್ದರು.

ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡು ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದರು.

ಕೇರಳದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *