Connect with us

Bengaluru City

ಮಂಗಳವಾರದಿಂದ ಸದನದಲ್ಲಿ ಕೈ ಶಾಸಕರು ಫುಲ್ ಆ್ಯಕ್ಟಿವ್- ಇದು ರಾಹುಲ್ ಬೆಂಗಳೂರು ಭೇಟಿ ಇಫೆಕ್ಟ್

Published

on

ಬೆಂಗಳೂರು: ಸದನಕ್ಕೆ ಬರ ಬಂದಿದೆ. ಆಡಳಿತ ಪಕ್ಷದ ಶಾಸಕರು ಮಂತ್ರಿಗಳು ಕಲಾಪಕ್ಕೆ ಹಾಜರಾಗುತ್ತಿಲ್ಲ ಎನ್ನುವ ಸುದ್ದಿಗಳಿಗೆ ಮಂಗಳವಾರದಿಂದ ಬ್ರೇಕ್ ಬೀಳಲಿದೆ.

ರಾಹುಲ್ ಗಾಂಧಿ ಹೇಳಿದ ಬ್ರೇಕಿಂಗ್ ನ್ಯೂಸ್‍ನಿಂದಾಗಿ ಕಾಂಗ್ರೆಸ್ ಶಾಸಕರು ಶಾಕ್ ಆಗಿದ್ದು, ಮುಂದಿನ ದಿನಗಳಲ್ಲಿ ಕಲಾಪದಲ್ಲಿ ಕೈ ನಾಯಕರು ಸಕ್ರಿಯವಾಗಿ ಭಾಗವಹಿಸುವ ಸಾಧ್ಯತೆಯಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ ಸದನದಲ್ಲಿ ಸಕ್ರಿಯವಾಗಿ ಹಾಜರಾಗಿ ಸರ್ಕಾರದ ಪರ ಮಾತನಾಡಿದವರಿಗೆ ಮಾತ್ರ ಮುಂದೆ ಟಿಕೆಟ್ ನೀಡುತ್ತೇವೆ. ಯಾವ ಶಾಸಕರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಯಾವ ಶಾಸಕರು ವಿಧಾನಸಭೆಯಲ್ಲಿ ಕಾಂಗ್ರೆಸ್ ಪರ ಮಾತನಾಡುತ್ತಿದ್ದಾರೆ ಎನ್ನುವ ಪಟ್ಟಿಯನ್ನು ಕಲೆ ಹಾಕುತ್ತಿದ್ದೇವೆ. ಟಿಕೆಟ್ ನೀಡುವಾಗ ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುವುದು ಎಂದು ಹೇಳುವ ಮೂಲಕ ಸದನದಲ್ಲಿ ಭಾಗವಹಿಸದ, ಪಕ್ಷದಲ್ಲಿ ಆಕ್ಟಿವ್ ಆಗದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಹೆಲಿಕಾಪ್ಟರ್‍ನಲ್ಲಿ ಟಿಕೆಟ್ ಬರಲ್ಲ, ಪತ್ರದಲ್ಲಿ ಟಿಕೆಟ್ ಬರಲ್ಲ. ಜನನಾಯಕ ಯಾರಿದ್ದಾರೋ ಅವರಿಗೆ ಮಾತ್ರ ಟಿಕೆಟ್. ಜನತೆಯೊಂದಿಗೆ ಗುರುತಿಸಿಕೊಂಡಿರುವ ಮುಖಂಡರಿಗೆ ಮಾತ್ರ ಟಿಕೆಟ್. ಅವರು ಎಷ್ಟೇ ಹಿರಿಯರು ಆಗಿರಲಿ, ಜನರ ನಡುವೆ ಇಲ್ಲ ಎಂದರೆ ಟಿಕೆಟ್ ನೀಡಲ್ಲ. ಎಲ್ಲ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಿ, ಪಕ್ಷವನ್ನ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.

ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಾಗುವುದು. ಬೇರೆ ಪಕ್ಷದಿಂದ ಟಿಕೆಟ್ ಕೇಳಿ ಬಂದವರಿಗೆ ಟಿಕೆಟ್ ನೀಡಲ್ಲ ಎಂದು ರಾಹುಲ್ ಹೇಳಿದ್ದು ಈಗ ಜೆಡಿಎಸ್ ಬಂಡಾಯ ನಾಯಕರಿಗೆ ಟಿಕೆಟ್ ಸಿಗುತ್ತಾ ಸಿಗಲ್ವಾ ಎನ್ನುವ ಪ್ರಶ್ನೆ ಎದ್ದಿದೆ.

ತೃಪ್ತಿ ಇದ್ಯಾ?: ಕೆಲ ದಿನಗಳ ಹಿಂದೆ ಉಸ್ತುವಾರಿ ಕಾರ್ಯದರ್ಶಿಗಳನ್ನು ರಾಜ್ಯಕ್ಕೆ ಕಳುಹಿಸಿದ್ದೇವೆ. ನಿಮಗೆ ತೃಪ್ತಿ ಇದೆಯಾ ಎಂದು ಪ್ರಶ್ನಿಸಿದ ಅವರು ಪಕ್ಷ ಒಂದು ಕುಟುಂಬದಂತೆ. ಎಲ್ಲರನ್ನೂ ತೃಪ್ತಿ ಪಡಿಸಲು ಅಸಾಧ್ಯ. ಆದರೆ ಎಲ್ಲರನ್ನು ಅಪ್ಪಿಕೊಂಡು ಸಮಾಧಾನ ಪಡಿಸಿ ಮುನ್ನಡೆಸಿಕೊಂಡು ಪಕ್ಷ ಹೋಗಲಿದೆ. ರಾಜ್ಯದ ಧ್ವನಿ ಸಿದ್ದರಾಮಯ್ಯ ಎಂದು ಹೇಳಿದರು.

ಭಯದ ವಾತಾವರಣ: ದೇಶ ವ್ಯಾಪಿ ಭಯದ ವಾತಾವರಣ ನಿರ್ಮಾಣವಾಗಿದೆ. ದಲಿತರು, ಅಲ್ಪಸಂಖ್ಯಾತರಲ್ಲಿ ಈ ಭಯ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಎಲ್ಲ ಸಮುದಾಯದ ಬಡವರ ಪರ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಆಡಳಿತ ಲಕ್ಷಣ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಹೊಗಳಿದರು.

ಉದ್ಯೋಗ ಇಲ್ಲ: ನಿರುದ್ಯೋಗ ಯುವಕರಿಗೆ ಮೋದಿ ನೀಡಿದ ಉದ್ಯೋಗದ ಭರವಸೆ ಈಡೇರಿಸಲಿಲ್ಲ. ಕಳೆದ ವರ್ಷ ಒಂದು ಲಕ್ಷ ಉದ್ಯೋಗವನ್ನೂ ಮೋದಿ ಸರ್ಕಾರ ನೀಡಿಲ್ಲ. ಕೇವಲ ಭಾರತೀಯ ಭಾರತೀಯರಲ್ಲೇ ಗಲಭೆ ಉಂಟು ಮಾಡಿ ಗೆಲ್ಲೋ ಆಸೆ ಬಿಜೆಪಿಯದ್ದು ಎಂದು ಹೇಳುವ ಮೂಲಕ ಮೋದಿ ಸರ್ಕಾರವನ್ನು ಅವರು ಟೀಕಿಸಿದರು.

 

Click to comment

Leave a Reply

Your email address will not be published. Required fields are marked *