ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪಕ್ಷದ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ (Sam Pitroda) ವಿರುದ್ಧ ಜಾರಿ ನಿರ್ದೇಶನಾಲಯ (ED) ಆರೋಪಪಟ್ಟಿ ಸಲ್ಲಿಸಿದೆ.
ಈ ಚಾರ್ಜ್‌ಶೀಟ್‌ನಲ್ಲಿ ಸೋನಿಯಾಗಾಂಧಿ ಎ-1 ಹಾಗೂ ರಾಹುಲ್ ಗಾಂಧಿ ಎ-2 ಆಗಿದ್ದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಈ ಮೂಲಕ ಮೊದಲ ಬಾರಿಗೆ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾದಂತಾಗಿದೆ. ಇದನ್ನೂ ಓದಿ: ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ
ಕೋರ್ಟ್ ಏ.25ಕ್ಕೆ ಮುಂದಿನ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಒಟ್ಟು 700 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಇಡಿ ಮುಂದಾಗಿದ್ದು ದೆಹಲಿ, ಮುಂಬೈನ ಬಾಂದ್ರಾ ಪ್ರದೇಶ ಮತ್ತು ಲಕ್ನೋದ ಬಿಶೇಶ್ವರ್ ನಾಥ್ ರಸ್ತೆಯಲ್ಲಿರುವ ಎಜೆಎಲ್ ಕಟ್ಟಡದಲ್ಲಿರುವ ಆಸ್ತಿಗಳ ಮೇಲೆ ನೋಟಿಸ್‌ಗಳನ್ನು ಅಂಟಿಸಲಾಗಿದೆ. ಇವುಗಳಲ್ಲಿ ದೆಹಲಿಯ ಬಹದ್ದೂರ್ ಶಾ ಜಾಫರ್ ಮಾರ್ಗದಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಹೆರಾಲ್ಡ್ ಹೌಸ್ ಕೂಡ ಸೇರಿದೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ
ಇಡಿ 2021 ರಲ್ಲಿ ತನಿಖೆ ಆರಂಭಿಸಿತ್ತು. ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಜೂನ್ 2014 ರಲ್ಲಿ ನೀಡಿದ ಆದೇಶದ ಆಧಾರದ ಮೇಲೆ ತನಿಖೆ ನಡೆಸಿತ್ತು.