ಯಾದಗಿರಿ: ರಾಹುಲ್‌ಗಾಂಧಿ (Rahul Gandhi) ಪ್ರಧಾನಿಯಲ್ಲ ಮುಂದೆಯೂ ಆಗಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಭವಿಷ್ಯ ನುಡಿದಿದ್ದಾರೆ.
Advertisement
ಯಾದಗಿರಿಯ ಹುಣಸಗಿಯಲ್ಲಿ ನಡೆದ ಬಿಜೆಪಿ (BJP) ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ನಮ್ಮ ಅಭಿವೃದ್ದಿ ಕೆಲಸಗಳ ಬಗ್ಗೆ ಏನೂ ಗೊತ್ತಿಲ್ಲ. ರಾಜ್ಯದಲ್ಲಿ ಕೆಲಸ ಪಡೆಯಬೇಕು ಅಂದ್ರೆ ಲಂಚ ಕೊಡಬೇಕು ಅಂತ ಹೇಳಿದ್ದಾರೆ. ಕಾಂಗ್ರೆಸ್ (Congress) ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರಗಳ ಬಗ್ಗೆಯೂ ಅವರಿಗೆ ಗೊತ್ತಿಲ್ಲ. ಹೀಗಾಗಿ ಅವರಿಗೆ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರದ ಫೈಲ್ ಕಳುಹಿಸುತ್ತಿದ್ದೇನೆ. ಭಷ್ಟ್ರರನ್ನ ಕಟ್ಟಿಕೊಂಡು ನಡೀತಿದ್ದೀಯಾ, ಇವರ ಮೇಲೇನಾದರೂ ಕ್ರಮ ತೆಗೆದುಕೊಳ್ಳುತ್ತೀರಾ? ಅಂತ ಫೈಲ್ ಕಳುಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ಕಲಂ 371-J ಸುಲಭದಲ್ಲಿ ಬಂದಿಲ್ಲ. ಅದನ್ನ ಕೊಡದಿದ್ದರೆ ಕಾಂಗ್ರೆಸ್ ನವರು ಓಡಾಡಲೂ ಕಷ್ಟ ಆಗುತ್ತಿತ್ತು. ಅನುದಾನ ನೀಡದೇ ಬರೀ 371-J ಜಾರಿ ಮಾಡಿ ಏನ್ ಮಾಡುತ್ತೀರಿ. ಯಡಿಯೂರಪ್ಪನವರು ಬಂದ ಮೇಲೆ 1,400 ಕೋಟಿ ಕೊಟ್ಟರು, ನಾನು 3 ಸಾವಿರ ಕೋಟಿ ಕ್ರಿಯಾ ಯೋಜನೆ ಮಾಡಿದ್ದೇನೆ. ಆದ್ರೆ ಕಾಂಗ್ರೆಸ್ ನವರು ಹಣ ಘೋಷಣೆ ಮಾಡಿ ಕೊಡಲೇ ಇಲ್ಲ ಎಂದು ಆರೋಪಿಸಿದ್ದಾರೆ.
Advertisement
ನಮ್ಮ ಅನುದಾನದಲ್ಲಿ ನಾವು 2 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡುತ್ತಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಮೀಸಲಿಡುತ್ತಿದ್ದೇವೆ. ಜೇವರ್ಗಿಯಲ್ಲಿ ನೀರಾವರಿ ಯೋಜನೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ (Congress Government) ಇದ್ದಾಗ ಕೆಕೆಆರ್‌ಡಿಬಿ (KKRDB) ಹಣ ಜನರಿಗೆ ಮುಟ್ಟಲಿಲ್ಲ. ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡಿಲ್ಲ, ದಿಂಬು – ಚಾದರ್ ಹಣ ಸಹ ಬಿಟ್ಟಿಲ್ಲ, ನೆಲ ನೀರಿನ ಮೇಲೂ ದುಡ್ಡು ಹೊಡೆದರು. ಪಿಎಸ್‌ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನವರು ಜನರ ಋಣದಲ್ಲಿದ್ದಾರೆ. ನಾವು ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ಅವರು ಹಿಂದುಳಿದವರ ಅಭಿವೃದ್ಧಿ ಹೆಸರಲ್ಲಿ ರಾಜಕಾರಣ ಮಾಡಿದರು. ಆದ್ರೆ ಅಭಿವೃದ್ಧಿ ಮಾಡಲಿಲ್ಲ. ನ್ಯಾ. ನಾಗಮೋಹನ ದಾಸ್ (Justice Nagamohan Das) ವರದಿಯನ್ನು ಜಾರಿಗೊಳಿಸುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದ್ದೇವೆ. ಸ್ವಾವಲಂಬನೆ, ಸ್ವಾಭಿಮಾನದ ಬದುಕು ಕೊಡಲು ಮೀಸಲಾತಿ ಹೆಚ್ಚಿಸಿದ್ದೇವೆ. ಸಾಮಾಜಿಕ ನ್ಯಾಯ ಭಾಷಣದ ಸರಕು ಅಲ್ಲ ಎಂದು ನುಡಿದಿದ್ದಾರೆ.
ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಹಿನ್ನೆಲೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಬೆಳ್ಳಿ ಗದೆ ನೀಡಿ ಸುರಪುರ ಶಾಸಕ ರಾಜೂಗೌಡ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶ್ರೀರಾಮುಲು, ಬೈರತಿ ಬಸವರಾಜ್, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಸೇರಿ ಹಲವರು ಭಾಗವಹಿಸಿದ್ದರು.